ವಿಜಯಪುರ ಟ್ರಾಫಿಕ್ ವ್ಯವಸ್ಥೆ ಪರಿಶೀಲಿಸಿದ ಎಸ್ಪಿ ಸೋನಾವಣೆ:ಸಂಚಾರ ವ್ಯವಸ್ಥೆ ಸುಧಾರಿಸಲು ವಿಶೇಷ ಅಭಿಯಾನ
ಸಂಜೆವಾಣಿ ವಾರ್ತೆ,
ವಿಜಯಪುರ, ಜು.೨೮:ವಿಜಯಪುರ ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ನಗರದ ಗಾಂಧಿ ವೃತ್ತ, ಮಾರುಕಟ್ಟೆ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖುದ್ದಾಗಿ ಸಂಚಾರ ವ್ಯವಸ್ಥೆ ಎಡರು ತೊಡರುಗಳನ್ನು ಪರಿಶೀಲಿಸಿದರು.
ಎಸ್ಪಿ ಸೋನಾವಣೆ ಅವರಿಗೆ ರಸ್ತೆಯ ಪಕ್ಕದಲ್ಲಿ ಕೆಲ ಕಡೆ ಅಡ್ಡಾದಿಡ್ಡಿಯಾಗಿ ಜನರು ವಾಹನ ನಿಲುಗಡೆ ಮಾಡಿದ್ದು ಕಂಡು ಬಂತು. ಇನ್ನೂ ಕೆಲ ಕಡೆ ನೋ ಪಾರ್ಕಿಂಗ್ ಜಾಗೆಯಲ್ಲಿಯೂ ಜನರು ವಾಹನ ನಿಲುಗಡೆ ಮಾಡಿರುವುದೂ ಗಮನಕ್ಕೆ ಬಂತು. ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಜರುಗಿಸಲು ಸ್ಥಳದಲ್ಲಿಯೇ ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದರು.
ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕೇಸ್ ಮಾಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದರು.
ಸುಗಮ ಸಂಚಾರಕ್ಕೆ ವಿಶೇಷ ಅಭಿಯಾನ
ನಗರದಲ್ಲಿ ದಿನೇದಿನೇ ಜನರು ಹಾಗೂ ವಾಹನ ದಟ್ಟನೆ ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಗಂಭೀರ ಚಿಂತನೆ ಮಾಡಲಾಗಿದೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ಸುದ್ದಿಗಾರರಿಗೆ ತಿಳಿಸಿದರು.
೧೦ ಪಿಎಸ್‌ಐ, ಎಎಸ್‌ಐ, ೧೦ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಬೈಕ್ ಗಳಲ್ಲಿ ಸಂಚರಿಸಿ ಸಂಚಾರ ವ್ಯವಸ್ಥೆಯನ್ನು ಕಣ್ಗಾವಲು ಮಾಡಲಿದ್ದಾರೆ. ಜನರಿಗೆ ಮೊದಲಿಗೆ ಸೂಕ್ತ ತಿಳಿವಳಿಕೆ ನೀಡಲಾಗುವುದು. ಆದಾಗ್ಯೂ ಸಂಚಾರ ನಿಯಮ ಉಲ್ಲಂಘನೆ ಅವ್ಯಾಹತವಾಗಿ ನಡೆದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ವಾಹನ ಚಾಲಕರು ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪೊಲೀಸರು ಕೈಗೊಳ್ಳುವ ಸಂಚಾರ ವ್ಯವಸ್ಥೆ ಸುಧಾರಿಸಲು ಕೈ ಜೋಡಿಸಬೇಕು ಎಂದು ಎಸ್ಪಿ ಸೋನಾವಣೆ ಮನವಿ ಮಾಡಿಕೊಂಡಿದ್ದಾರೆ.