ಯುವಕರೇ ದೇಶದ ಸಂಪತ್ತು: ಸತೀಶ ಪವಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೮:ಭಾರತ ಸೇವಾದಳ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆ, ನಿಸ್ವಾರ್ಥ ಸೇವೆಯಂತಹ ಉದಾತ್ತ ಗುಣಗಳನ್ನು ಮೂಡಿಸುತ್ತಿರುವ ಭಾರತ ಸೇವಾದಳದ ಕಾರ್ಯ ಶ್ಲಾಘನೀಯ ಎಂದು ಬಂಜಾರಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸತೀಶ ಬಿ ಪವಾರ ಹೇಳಿದರು.
ವಿಜಯಪುರ ಭಾರತ ಸೇವಾದಳ ಜಿಲ್ಲಾ ಸಮಿತಿ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಬಂಜಾರಾ ಪದವಿಪೂರ್ವ ಕಾಲೇಜು ಇವರುಗಳ ಸಹಯೋಗದಲ್ಲಿ ಬಂಜಾರಾ ಕಾಲೇಜಿನಲ್ಲಿ, ವಿದ್ಯಾರ್ಥಿಗಳಿಗೆ, ಉಪನ್ಯಾಸಕರುಗಳಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
ಭಾರತ ಸೇವಾದಳ ಸ್ವಾತಂತ್ರ‍್ಯ ಹೋರಾಟಗಾರರು, ಮತ್ತು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ. ಅಲ್ಲದೇ ದೇಶದ ಸ್ವಾತಂತ್ರ‍್ಯ ಚಳವಳಿಗೆ ಅಪಾರ ಕೊಡುಗೆ ನೀಡಿದೆ. ಇಂದಿನ ಯುವಕರು ದೇಶಪ್ರೇಮ, ಶಿಸ್ತು, ಸಮಯಪ್ರಜ್ಞೆ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಂದಿನ ಯುವಕರೆ ದೇಶದ ಸಂಪತ್ತು. ಆ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗೋಣ ಎಂದರು. ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಕುರಿತು ಉಪನ್ಯಾಸ ನೀಡಿದರು. ಹಾಗೇ ಧ್ವಜಾರೋಹಣ, ಅವರೋಹಣ, ಧ್ವಜ ನೀತಿಸಂಹಿತೆ, ಧ್ವಜದ ನಿಯಮಗಳ ಕುರಿತು ತಿಳಿಹೇಳಿದರು. ಇನ್ನೋರ್ವ ಸೇವಾದಳದ ರಾಜ್ಯ ಸಂಪನ್ಮೂಲ ಶಿಕ್ಷಕ ಸೋಮಶೇಖರ ರಾಠೋಡ ರಾಷ್ಟ್ರಧ್ವಜವನ್ನು ಕಟ್ಟುವ, ಮಡಚುವ, ಹಾರಿಸುವ ವಿಧಾನಗಳನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ಎಮ್.ಎಸ್.ನಿಂಬರಗಿ, ಎಸ್.ಎ. ಬುಗಾಡೆ, ಎಂ.ಎಮ್. ಚೌಧರಿ ಇನ್ನೂ ಹಲವರು ಉಪಸ್ಥಿತರಿದ್ದರು.
ಉಪನ್ಯಾಸಕ ಎಸ್.ಎಸ್. ತೆನ್ನಿಹಳ್ಳಿ ನಿರೂಪಿಸಿದರು, ಉಪನ್ಯಾಸಕಿ ಭಾರತಿ ನಾಯಕ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ೨೫೦ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದ್ದರು.