ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಆಡಳಿತಕ್ಕೆ ಮೂರು ವರ್ಷದ ಸಂಭ್ರಮ:ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ: ಪ್ರೊ. ಪ್ರಮೋದ್ ಗಾಯಿ ಮೆಚ್ಚುಗೆ
ಕಲಬುರಗಿ:ಜು.27: ಪ್ರೊ. ಬಟ್ಟು ಸತ್ಯನಾರಾಯಣ ಅವರು ವಿಶ್ವವಿದ್ಯಾಲಯದ ಅಭಿವೃದ್ಧಿಯ ಎಲ್ಲ ರಂಗಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಪ್ರಮೋದ್ ಬಿ. ಗಾಯಿ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ್ ಅವರ ಮೂರು ವರ್ಷದ ಪರಿಶೀಲನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ನಾನು ಅವರ ಕೆಲಸವನ್ನು ನೋಡಿದ್ದೇನೆ. ಅವರೊಬ್ಬ ಸೂಕ್ಷ್ಮ ಆಡಳಿತಗಾರ. ಶಿಕ್ಷಣ ತಜ್ಞರು ಉತ್ತಮ ಆಡಳಿತಗಾರರಾಗಿರುವುದು ಬಹಳ ಅಪರೂಪ. ಆದರೆ ಪ್ರೊ.ಬಟ್ಟು ಸತ್ಯನಾರಾಯಣ್ ಅವರು ಇದಕ್ಕೆ ಅಪವಾದ ಎಂದರು.
ಶೈಕ್ಷಣಿಕ, ಸಂಶೋಧನೆ, ಪರೀಕ್ಷೆ ಮತ್ತು ಹಣಕಾಸು ವಿಶ್ವವಿದ್ಯಾಲಯದ ಆಧಾರ ಸ್ತಂಭಗಳಾಗಿವೆ. ಅವರು ಈ ಎಲ್ಲ ಕ್ಷೇತ್ರಗಳಲ್ಲಿ ಸರಣಿ ಸುಧಾರಣೆಗಳನ್ನು ಪರಿಚಯಿಸಿದ್ದಾರೆ ಮತ್ತು ಈ ಎಲ್ಲ ರಂಗಗಳಲ್ಲಿ ಪಾರದರ್ಶಕವಾಗಿ ಮತ್ತು ಸಮರ್ಪಿತವಾಗಿ ಕೆಲಸ ಮಾಡಿದ್ದಾರೆ. ವಿಶ್ವವಿದ್ಯಾಲಯವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಸಮಾಜಕ್ಕಾಗಿ ಕಾರ್ಯಕ್ರಮಗಳ ಮೂಲಕ ಕೆಲಸ ಮಾಡಿದೆ. ವಿಶ್ವವಿದ್ಯಾಲಯಗಳ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಅವರಿಗೆ ಸ್ಪಷ್ಟ ದೃಷ್ಟಿಕೋನವಿದೆ ಎಂದು ಅವರು ಹೇಳಿದರು.
ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯವು ಶ್ರೇಯಾಂಕದಲ್ಲಿ 150ರಿಂದ 200 ಶ್ರೇಣಿಯಲ್ಲಿದೆ. ಇನ್ನೆರಡು ವರ್ಷಗಳಲ್ಲಿ ಇದು ದೇಶದ ಅಗ್ರ 100 ವಿಶ್ವವಿದ್ಯಾಲಯಗಳಲ್ಲಿ ಒಂದಾಗಲಿದೆ.ವಿಶ್ವವಿದ್ಯಾಲಯ ದೇಶದ ಹಿಂದೂಳಿದ ಪ್ರದೇಶದಲ್ಲಿ ನೆಲೆಗೊಂಡಿದ್ದರೂ, ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ನಿರ್ಮಿಸಲು ಬರುತ್ತಿದ್ದಾರೆ. ಅವರು ಗುಣಮಟ್ಟದ ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ ಮತ್ತು ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರದಾರ್, ಡೀನ್, ಮುಖ್ಯಸ್ಥರು ಮತ್ತು ಅಧಿಕಾರಿಗಳು ಸಹ ಪ್ರೊ. ಬಟ್ಟು ಸತ್ಯನಾರಾಯಣ್ ಅವರ ಕಳೆದ ಮೂರು ವರ್ಷಗಳ ಆಡಳಿತದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ತಮ್ಮ ವಿಭಾಗಗಳಲ್ಲಿ ವಿಶ್ವವಿದ್ಯಾಲಯದ ಬೆಳವಣಿಗೆಯ ಬಗ್ಗೆ ಮಾತನಾಡಿದರು ಮತ್ತು ಪ್ರೊ. ಬಟ್ಟು ಸತ್ಯನಾರಾಯಣ್ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಭವಿಷ್ಯದ ಬೆಳವಣಿಗೆ ಮತ್ತು ಯಶಸ್ಸಿಗೆ ಹಾರೈಸಿದರು.
ಕೊನೆಯಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರು ಮಾತನಾಡಿ, ವಿಶ್ವವಿದ್ಯಾಲಯದ ಎಲ್ಲಾ ಪ್ರಗತಿಯು ನನ್ನದಲ್ಲ, ನಾವು ತಂಡವಾಗಿ ಕೆಲಸ ಮಾಡಿದ್ದರಿಂದ ಎಲ್ಲವೂ ಸಾಧ್ಯವಾಗಿದೆ. ಬೋಧಕ ಮತ್ತು ಬೋಧಕೇತರ ಸಮುದಾಯ ಒಟ್ಟಾಗಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಿದೆ. ಸುದೀರ್ಘ ವೃತ್ತಿಜೀವನವನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ಯುವ ಶಿಕ್ಷಕರನ್ನು ನಾವು ಹೊಂದಿದ್ದೇವೆ. ಅವರು 2047ರ ವೇಳೆಗೆ ವಿಕಸಿತ ಭಾರತ ಸಾಧಿಸಲು ತಮ್ಮ ಕೊಡುಗೆ ನೀಡಬಲ್ಲರು ಎಂದರು.
ನಿಯಮಗಳ ಪ್ರಕಾರ ವಿಶ್ವವಿದ್ಯಾಲಯವನ್ನು ನಡೆಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ಶೈಕ್ಷಣಿಕ ಸ್ಥಿರತೆ ಮತ್ತು ಕ್ಯಾಂಪಸ್‌ನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಸ್ಥಾಪಿಸುವುದು, ಪರೀಕ್ಷೆಗಳನ್ನು ನಡೆಸುವುದು ಮತ್ತು ಸಮಯಕ್ಕೆ ಫಲಿತಾಂಶಗಳನ್ನು ನೀಡುವುದು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ಬಹಳ ಮುಖ್ಯ. ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಆದ್ದರಿಂದ ನಾವು ಅನೇಕ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ ಮತ್ತು ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಯಲ್ಲಿದೆ ಎಂದು ಅವರು ತಿಳಿಸಿದರು.
ಕೋವಿಡ್ ನಂತರ ನಾವು ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಸುವ್ಯವಸ್ಥಿತಗೊಳಿಸಿದ್ದೇವೆ. ಪ್ರವೇಶಾತಿಯನ್ನು ಹೆಚ್ಚಿಸಲು ನಮಗೆ ಹೆಚ್ಚು ಹೆಚ್ಚು ಹಾಸ್ಟೆಲ್‌ಗಳು ಬೇಕಾಗುತ್ತವೆ. ಇನ್ನೂ 500 ಸಾಮರ್ಥ್ಯದ ಹಾಸ್ಟೆಲ್ ನಿರ್ಮಾಣ ಪ್ರಗತಿಯಲ್ಲಿದೆ. ಈ ವರ್ಷ ನಾವು ಅನೇಕ ಪಿಜಿ ಕೋರ್ಸಗಳ ಸಿಟಗಳನ್ನು ಹೆಚ್ಚಿಸಿದ್ದೇವೆ. ಉತ್ತಮ ವಿದ್ಯಾರ್ಥಿಗಳನ್ನು ಆಕರ್ಷಿಸಲು ನ್ಯಾಕ್ ಮಾನ್ಯತೆ ಬಹಳ ಮುಖ್ಯ. ನಾವು ನ್ಯಾಕ್ ನ ಎರಡನೇ ಆವೃತ್ತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಸ್ವಯಂ ಅಧ್ಯಯನ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಮತ್ತು ಈ ಬಾರಿ ಉತ್ತಮ ಗ್ರೇಡ್ ಪಡೆಯುವ ಭರವಸೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಅನೇಕ ಹೊಸ ವಿಭಾಗಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಶೀಘ್ರದಲ್ಲೇ ಭಾಷಾಂತರ ಅಧ್ಯಯನ ವಿಭಾಗವನ್ನು ಪ್ರಾರಂಭಿಸುತ್ತೇವೆ. ನಾವು ವಿಜ್ಞಾನ ಮತ್ತು ಎಂಜಿನಿಯರಿAಗ್‌ಗಾಗಿ ಉತ್ತಮ ಪ್ರಯೋಗಾಲಯಗಳನ್ನು 90 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಬಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ ಉದ್ಯೋಗ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ, ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಲ್ಲಿ ಕೆಲಸ ಪಡೆದಿದ್ದಾರೆ. ಉತ್ತಮ ಆರೋಗ್ಯ ಮತ್ತು ಫಿಟ್‌ನೆಸ್ ಅವಕಾಶಗಳನ್ನು ಒದಗಿಸಲು ನಮ್ಮ ದೈಹಿಕ ಶಿಕ್ಷಣ ವಿಭಾಗವನ್ನು ಅನುಭವಿ ಶಿಕ್ಷಕರು ಮತ್ತು ಅತ್ಯಾಧುನಿಕ ಸಲಕರಣೆಗಳೊಂದಿಗೆ ಬಲಪಡಿಸಲಾಗಿದೆ. ಸಂಶೋಧನಾ ಯೋಜನೆಗಳು, ಪೇಟೆಂಟ್‌ಗಳು, ಪ್ರಕಟಣೆಗಳು ಮತ್ತು ಗುಣಮಟ್ಟದ ವಿದ್ಯಾರ್ಥಿಗಳನ್ನು ತಯ್ಯಾರಿಸಲು ಶಿಕ್ಷಕರು ಹೆಚ್ಚು ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡಲು ಸಲಹೆ ನೀಡುತ್ತೇನೆ. ಎಲ್ಲರೂ ಒಟ್ಟಾಗಿ ವಿಶ್ವವಿದ್ಯಾಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಕಿರಣ್ಮಯಿ ಸತ್ಯನಾರಾಯಣ್, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್, ಪ್ರೊ. ಚನ್ನವೀರ್ ಆರ್.ಎಂ., ಸಿಒಇ ಕೋಟ ಸಾಯಿಕೃಷ್ಣ, ಹಣಕಾಸು ಅಧಿಕಾರಿ ಡಿ. ರಾಮದೊರೈ, ಪ್ರೊ. ಬಸವರಾಜ್ ಡೋಣೂರು, ಪ್ರೊ. ವಿಕ್ರಮ್ ವಿಸಾಜಿ, ಪ್ರೊ. ಭೀಮರಾವ್ ಭೋಸ್ಲೆ, ಪ್ರೊ. ಜಿ.ಆರ್. ಅಂಗಡಿ, ಪ್ರೊ. ಅಸ್ಲಾಂ, ಪ್ರೊ. ಎನ್. ಸತ್ಯನಾರಾಯಣ್, ಪ್ರೊ. ಶಿವಗಂಗಾ ರುಮ್ಮಾ, ಪ್ರೊ. ಸುನೀತಾ ಮಂಜನಬೈಲ್, ಪ್ರೊ. ಆರ್.ಎಸ್. ಹೆಗಡಿ, ಡಾ. ಬಸವರಾಜ್ ಕುಬಕಡ್ಡಿ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಅಂಕಿತಾ ಸತ್ಪತಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಜಯದೇವಿ ಜಂಗಮಶೆಟ್ಟಿ, ಡಾ. ರವಿಕಿರಣ್ ನಾಕೋಡ್, ಡಾ. ಸ್ವಪ್ನಿಲ್ ಚಾಪೇಕರ್ ಅವರು ರಾಷ್ಟçಗೀತೆ ಮತ್ತು ನಾಡಗೀತೆಯನ್ನು ಹಾಡಿದರು. ಡಾ. ರೇಷ್ಮಾ ನದಾಫ್ ಅವರು ವಂದಿಸಿದರು.