ಸಿ.ಎಂ. ಜನಸ್ಪಂದನಾ ಸಭೆ ಹಿನ್ನೆಲೆ:ಆ. ೫ ರೊಳಗೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ ಪಟ್ಟಿ ಸಲ್ಲಿಸಿ:ಪ್ರಿಯಾಂಕ್ ಖರ್ಗೆ
ಕಲಬುರಗಿ:ಜು.೨೭:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ ಎರಡನೇ ವಾರ ಅಥವಾ ಸ್ವಾತಂತ್ರ‍್ಯ ದಿನಾಚರಣೆ ನಂತರ ಕಲಬುರಗಿಯಲ್ಲಿ ವಿಭಾಗ ಮಟ್ಟದ ಜನಸ್ಪಂದನ ಸಭೆ ನಡೆಸಲು ಉದ್ದೇಶಿಸಿದ್ದು, ಅಂದು ಮುಖ್ಯಮಂತ್ರಿಗಳಿAದ ಜಿಲ್ಲೆಯ ವಿವಿಧ ಯೋಜನೆಗಳ ಅಡಿಗಲ್ಲು, ಉದ್ಘಾಟನೆ ಹಾಗೂ ಸೌಲಭ್ಯ ವಿತರಣೆಯ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಸ್ಟ್ ೫ ರೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಿ.ಎಂ. ಜನಸ್ಪಂದನಾ ಸಭೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಕಾರ್ಯಕ್ರಮ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಶ್ರಮಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.
ಕಳೆದ ಬಾರಿಯ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಚಿಂಚೋಳಿ, ಕಲಬುರಗಿ ಜನಸ್ಪಂದನಾ ಸಭೆಯಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಸರಿಯಾದ ಪ್ರಮಾಣದಲ್ಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹಿಂದಿನ ಸಭೆಯ ತಪ್ಪು ಮರುಕಳಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಿ.ಎಂ. ಜನಸ್ಪಂದನಾ ಸಭೆಯಲ್ಲಿ ಸಲ್ಲಿಕೆಯಾಗುವ ಪ್ರತಿ ಅರ್ಜಿಯನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.
ಸಿ.ಎಂ. ಅಧ್ಯಕ್ಷತೆಯ ವಿಭಾಗ ಮಟ್ಟದ ಜನಸ್ಪಂದನಾ ಸಭೆ ಇದಾಗಿದ್ದರಿಂದ ವಿವಿಧ ಜಿಲ್ಲೆಯ ಜನರು ಆಗಮಿಸುತ್ತಾರೆ. ಹೀಗಾಗಿ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರಿಗೆ ನಿರ್ದೇಶನ ನೀಡಿದರು. ಊಟ, ನೀರು, ಪಾರ್ಕಿಂಗ್, ಭದ್ರತೆ ವ್ಯವಸ್ಥೆ ಎಲ್ಲವು ಅಚ್ಚುಕಟ್ಟಾಗಬೇಕು. ಸೌಲಭ್ಯ ವಿತರಣೆಗೆ ಫಲಾನುಭವಿಗಳನ್ನು ಕರೆತರಬೇಕು. ಅರ್ಜಿ ಸ್ವೀಕಾರಕ್ಕೆ ಇಲಾಖಾವಾರು ಕೌಂಟರ್ ತೆರೆಯಬೇಕು ಎಂದರು.
ಜನಸ್ಪAದನಾ ಸಭೆಗೆ ಆಗಮಿಸುವ ಸಾರ್ವಜನಿಕರು ಮುಂಚಿತವಾಗಿಯೇ ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪ್ರಮುಖ ಇಲಾಖೆಯಿಂದ ಜನಪರ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಮಳಿಗೆ ಹಾಕಬೇಕು. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳಿಂದ ಯೋಜನೆಗಳ ಪ್ರಾತ್ಯಕ್ಷಿಕೆ ಸಹ ಏರ್ಪಾಡು ಮಾಡಬೇಕೆಂದ ಸಚಿವರು, ಸಂಪೂರ್ಣ ಕಾರ್ಯಕ್ರಮ ದಾಖಲೀಕರಣ ಮಾಡುವಂತೆ ಇವೆಂಟ್ ಮ್ಯಾನೇಜರ್ ಅವರಿಗೆ ಸೂಚಿಸಿದರು.
ಜನಸ್ಪಂದನ ಸಭೆ ಜಾತ್ರೆಯಾಗಬಾರದು: ಮುಖ್ಯಮಂತ್ರಿಗಳ ಜನಸ್ಪಂದನ ಸಭೆ ಜಾತ್ರೆಯಾಗಬಾರದು. ಸಿ.ಎಂ. ಜನಸ್ಪಂದನಾ ಸಭೆ ಪ್ರಮುಖ ವಿಷಯಗಳ ಪ್ರಸ್ತಾವನೆಗೆ ವೇದಿಕೆಯಾಗಬೇಕು. ಸಿ.ಎಂ. ಬಂದ್ರು, ಹೋದ್ರು ಏನು ಪ್ರಯೋಜನವಾಗಲಿಲ್ಲ ಎಂದು ಜನ ಮಾತಾಡಿಕೊಳ್ಳಬಾರದು ಎಂದು ಶಾಸಕ ಎಂ.ವೈ.ಪಾಟೀಲ ಅಧಿಕಾರಿಗಳಿಗೆ ಒತ್ತಿ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಅಲ್ಲಮಪ್ರಭು ಪಾಟೀಲ ಪಹಣಿ ತಿದ್ದುಪಡಿ, ಪಿಂಚಣಿದAತಹ ಸಣ್ಣ-ಪುಟ್ಟ ಸಮಸ್ಯೆಗಳಿಗೆ ರಾಜ್ಯದ ಮುಖ್ಯಮಂತ್ರಿ ಬಳಿ ಜನ ಬರುತ್ತಾರಂದರೆ ಅಧಿಕಾರಿಗಳು ಏನು ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ ಅವರು, ಇಂತಹ ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ಹಂತದಲ್ಲಿಯೆ ಬಗೆಹರಿಸಬೇಕು. ದೊಡ್ಡ ಮತ್ತು ಹೊಸ ಯೋಜನೆಗಳಿಗೆ ಸಿ.ಎಂ. ಬಳಿ ಮನವಿ ಮಾಡಿದಲ್ಲಿ ಅದು ಜಿಲ್ಲೆ, ಕ್ಷೇತ್ರಕ್ಕೆ ಒಳ್ಳೆಯದಾಗಲಿದೆ ಎಂದರು.
ಮುಖ್ಯಮAತ್ರಿಗಳ ನೀತಿ ಮತ್ತು ಕಾರ್ಯಕ್ರಮ ಸಲಹೆಗಾರರಾಗಿರುವ ಆಳಂದ ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕೆ.ಡಿ.ಪಿ. ಸಭೆಗೆ ಕೆಲವು ಅಧಿಕಾರಿಗಳ ಗೈರು ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, ಈ ಬಗ್ಗೆ ತಾಲೂಕ ಪಂಚಾಯತಿ ಇ.ಓ ಅವರು ಪತ್ರ ಬರೆದಿದ್ದು, ಸಂಬAಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಕೆ.ಡಿ.ಪಿ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಡಿ.ಸಿ.ಗೆ ತಿಳಿಸಿದರು.
ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಕೆ.ಡಿ.ಪಿ. ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕಾದ ಅಧಿಕಾರಿಗಳು ತಪ್ಪದೆ ಸಭೆಗೆ ಹಾಜರಾಗಬೇಕು. ವಿಶೇಷವಾಗಿ ಶಿಷ್ಟಾಚಾರದಲ್ಲಿ ಲೋಪವಾಗದಂತೆ ಎಚ್ಚರ ವಹಿಸಬೇಕು. ಶಿಷ್ಟಾಚಾರ ಉಲ್ಲಂಘನೆ ಮುಂದುವರೆದಲ್ಲಿ ಮುಲಾಜಿಲ್ಲದೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದ ಅವರು, ಜನಸ್ಪಂದನಾ ಸಭೆ ಹಿನ್ನೆಲೆಯಲ್ಲಿ ತಮ್ಮ ಇಲಾಖೆಯ ಅಡಿಗಲ್ಲು, ಉದ್ಘಾಟನಾ ಕಾಮಗಾರಿಗಳ ಪಟ್ಟಿ ಕೂಡಲೆ ಸಲ್ಲಿಸಬೇಕೆಂದರು.
ಸಭೆಯಲ್ಲಿ ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಐ.ಜಿ.ಪಿ. ಅಜಯ್ ಹಿಲೋರಿ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.