ವಚನ ಮಂಟಪ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ,ಜು.27-ಬಜೆಟ್‌ನಲ್ಲಿ ನೀಡಿದ ಭರವಸೆಯಂತೆ ವಚನ ಮಂಟಪ ನಿರ್ಮಾಣ ಮಾಡುವ ಉದ್ದೇಶದಿಂದ ಜಾಗ ಪರಿಶೀಲನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ವಿವಿಧೆಡೆ ಇತರೆ ಯೋಜನೆಗಳಿಗೆ ಸ್ಥಳ ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆರೆ ಭೋಸ್ಗಾ ಅಭಿವೃದ್ದಿ, ಮಹಿಳೆಯರಿಗಾಗಿ ಹಾಸ್ಟೆಲ್, ಮಹಿಳೆಯರ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಹಲವಾರು ಯೋಜನೆಗಳ ಜಾರಿ ಕುರಿತಂತೆ ಜಾಗ ವೀಕ್ಷಣೆ ಮಾಡಲಾಗಿದೆ. ಅಂತರಾಷ್ಟ್ರೀಯ ಗುಣಮಟ್ಟದ ಮತ್ತೊಂದು ಸ್ಟೇಡಿಯಂ ನಿರ್ಮಾಣ ಮಾಡುವ ಉದ್ದೇಶದಿಂದ ರೂ.30 ಕೋಟಿ ಅನುದಾನ ಬಿಡುಗಡೆಯಾಗಿದೆ. ಹಾಕಿ ಸ್ಟೇಡಿಯಂ ಅಭಿವೃದ್ದಿ ಮಾಡಲಾಗುವುದು. ರಾಹುಲ್ ದ್ರಾವಿಡ್ ಹಾಗೂ ಪ್ರಕಾಶ ಪಡುಕೋಣೆ ಕ್ರೀಡಾ ತರಬೇತಿ ಸಂಸ್ಥೆ ಮಾಡಿದವರನ್ನೇ ಕರೆಸಿ ಇಲ್ಲಿಯೂ ಕೂಡಾ ತರಬೇತಿ ನೀಡುವುದಕ್ಕೆ ಬೇಕಾಗುವ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ಸ್ ಕ್ಲಸ್ಟರ್
ಮೂಲಸೌಕರ್ಯ ಅಭಿವೃದ್ದಿ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲರ ಜತೆ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲೆಕ್ಟ್ರಾನಿಕ್ ಕ್ಲಸ್ಟರ್ ಮ್ಯಾನಿಫಾಕ್ಷರಿಂಗ್ ನಿರ್ಮಾಣ ಮಾಡಲು ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ನೀಲಿ ನಕ್ಷೆ ಹಾಕಲಾಗುವುದು.
ಕೌಶಲ್ಯಾಭಿವೃದ್ದಿ ಹಾಗೂ ಐಟಿಬಿಟಿ ಸಚಿವಾಲಯದಿಂದ ಉದ್ಯಮಶೀಲತೆ ಹೆಚ್ಚಿಸಲು ಅವರಿಗೆ ಉದ್ಯೋಗ ಪಡೆದುಕೊಳ್ಳಲು ಮಲ್ಟಿಸ್ಕಿಲ್ ಇನ್ಕ್ಯೂಬೇಷನ್ ಸೆಂಟರ್ ಸ್ಥಾಪನೆಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಜಿಡಿಎ ವತಿಯಿಂದ ಹೊಸ ಕಲಬುರಗಿ ನಗರದ ನೀಲಿ ನಕ್ಷೆ ಹಾಕಲಾಗುವುದು ಎಂದು ತಿಳಿಸಿದರು.
ಘನತ್ಯಾಜ್ಯ ನಿರ್ವಹಣೆ
ಘನತ್ಯಾಜ್ಯ ನಿರ್ವಹಣೆಗೆ ವಾಹನ ಖರೀದಿ ಮಾಡಲಾಗಿದೆ. ರೂ 6.68 ಕೋಟಿ ವೆಚ್ಚದಲ್ಲಿ ನಗರ ಸ್ವಚ್ಛತೆಗೆ ಬೇಕಾಗುವ ಯಂತ್ರಹೊAದಿದ ವಾಹನಗಳನ್ನು ನೀಡಲಾಗುತ್ತಿದೆ ಎಂದರು.
ಕ್ರೀಡಾಗ್ರಾಮ
ಕೆಎಸ್‌ಸಿ ಅವರಂತೆ ಕ್ರೀಡಾ ಗ್ರಾಮ ನಿರ್ಮಾಣ ಮಾಡಬೇಕಿತ್ತು. ಜಾಗ ನಮ್ಮಿಂದ ಕೊಡಲಾಗುವುದು ಆದರೆ ನೀವೇ ನಿರ್ಮಾಣ ಮಾಡಬೇಕು ಹಾಗೂ ತರಬೇತಿ ನೀಡುವಂತೆ ಕೂಡಾ ಬೇಡಿಕೆ ಇಡಲಾಗಿತ್ತು. ಆದರೆ ಆಗ ಸರ್ಕಾರ ಪತನವಾಗಿದ್ದರಿಂದ ಯೋಜನೆ ನಿಂತು ಹೋಗಿತ್ತು. ಈಗ ಅವರೊಂದಿಗೆ ಮಾತನಾಡಲಾಗಿದೆ. ಕಾಲಾವಕಾಶ ಬೇಕಿದ್ದು ಸಾಕಷ್ಟು ಅವಶ್ಯಕವಿರುವ ಜಾಗದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ಜನಸ್ಪAದನ
ಸಿಎA ಆದೇಶದಂತೆ ವಿಭಾಗೀಯ ಕೇಂದ್ರದಲ್ಲಿ ಜನಸ್ಪಂದನೆ ಮಾಡಬೇಕು ಕಲಬುರಗಿಯಲ್ಲಿ ನಡೆಯಲಿರುವ ಜನಸ್ಪಂದನೆಯಲ್ಲಿ ಖುದ್ದಾಗಿ ಸಿಎಂ ಸೇರಿದಂತೆ ಇತರೆ ಸಚಿವರು ಇರಲಿದ್ದಾರೆ. ಸಿಎಂ ಜೊತೆಗೆ ಮಾತಮಾಡಿ ಅಗಸ್ಟ್ 2 ಅಥವಾ 3. ನೇ ವಾರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು. ಈ ಮೊದಲು ಎನ್‌ವಿ ಕಾಲೇಜು ಆವರಣದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ವಿಭಾಗೀಯ ಮಟ್ಟದಲ್ಲಿ ನಡೆಸಲಾಗುತ್ತಿರುವುದರಿಂದ ಹೆಚ್ಚಿನ ಜಾಗದ ಅವಶ್ಯಕತೆ ಇರುವುದರಿಂದ ಗುಲಬರ್ಗಾ ವಿವಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಬೆಳೆ ವಿಮೆ
ಜಿಲ್ಲೆಯಲ್ಲಿ ಇದೂವರೆಗೆ 1.58 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದು ಇದೇ ಜುಲೈ 31 ಕ್ಕೆ ಕೊನೆಯ ದಿನವಾಗಿದ್ದು ಇನ್ನೂ ಹೆಚ್ಚಿನ ಸಂಖ್ಯೆಯ ರೈತರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಐತಿಹಾಸಿಕ ಕೋಟೆ ಜಾಗ ಒತ್ತುವರಿ ತೆರವು
ಐತಿಹಾಸಿಕ ಕಲಬುರಗಿ ಕೋಟೆಗೆ ಸಂಬAಧಿಸಿದ ಜಾಗ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದ ಸಚಿವರು ಹೊರ ಭಾಗದ ಎಎಸ್‌ಐ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದರೆ ತೆರವುಗೊಳಿಸಲಾಗುವುದು ಎಂದರು.
ವಿರೋಧ ಪಕ್ಷ ವಾಕ್ ಔಟ್
ಸದನದಲ್ಲಿ ಚರ್ಚೆ ಮಾಡದ ವಿರೋಧ ಪಕ್ಷದ ನಾಯಕರು ಸದನದಿಂದ ವಾಕ್ ಔಟ್ ಮಾಡಿದ್ದಾರೆ. ಎಲ್ಲರೂ ಹೊರಗೆ ಹೋಗಿದ್ದರೆ ರಾಜ್ಯಾಧ್ಯಕ್ಷರು ಒಳಗಡೆ ಇದ್ದರು. ಮೂಡಾ ಸೇರಿದಂತೆ ವಿರೋಧ ಪಕ್ಷದ ನಾಯಕರು ಎತ್ತಿರುವ ಎಲ್ಲ ವಿಚಾರಗಳು ತಮ್ಮ ಪಕ್ಷದ ವೈಫಲ್ಯತೆ ಮುಚ್ಚಿಕೊಳ್ಳುವ ಪ್ರಯತ್ನ ವಾಗಿದೆ. ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿದೆ. ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ನಾವೇ ಹೇಳಿದ್ದೇವೆ. ಎಸ್‌ಐಟಿ ರಚನೆಯಾಗಿದೆ ತನಿಖೆ ನಡೆಯುತ್ತಿದೆ. ಆದರೆ ಇಡಿಯವರು ಈ ಪ್ರಕರಣದಲ್ಲಿ ಸಿಎಂ ಹಾಗೂ ಡಿಸಿಎಂ ಹಾಗೂ ನಾಗೇಂದ್ರ ಅವರನ್ನ ಸಿಕ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಐಟಿ ತನಿಖೆ
ಯತ್ನಾಳ್ ಆರೋಪಿಸಿದಂತೆ ಯಡಿಯೂರಪ್ಪ ಅವರು ಪದೇ ಪದೇ ವಿದೇಶಕ್ಕೆ ಯಾಕೆ ಹೋಗುತ್ತಿದ್ದಾರೆ. ? ಈ ಬಗ್ಗೆ ಇಡಿ ಯಾಕೆ ತನಿಖೆ ಮಾಡುತ್ತಿಲ್ಲ ? ಬಿಟ್ ಕಾಯಿನ್ ಪ್ರಕರಣದ ಮೇಲೆ ತನಿಖೆ ಮಾಡುತ್ತಿಲ್ಲ ? ಗಂಗಾ ಕಲ್ಯಾಣದಲ್ಲಿ ತನಿಖೆ ಯಾಕೆ ಆಗುತ್ತಿಲ್ಲ ? ದೇವರಾಜು ಅರಸ್ ಟ್ರಕ್ ಟರ್ಮಿನಲ್ ಹಗರಣವನ್ನು ಇಡಿ ಯಾಕೆ ತನಿಖೆ ನಡೆಸುತ್ತಿಲ್ಲ ? ಬಿಎಸ್ ವೈ ಅವರ ಪಾಕ್ಸೋ ಕೇಸ್ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲ ? ಮಾಧ್ಯಮಗಳು ಯಾಕೆ ಪ್ರಸಾರ ಮಾಡುತ್ತಿಲ್ಲ? ಎಂದರು.
ಚುನಾಯಿತ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಖರ್ಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ 3000 ಐಟಿ ರೈಡ್ ಆಗಿವೆ. 121 ರಾಜಕಾರಣಿಗಳ ಮೇಲೆ ಅದರಲ್ಲೂ 115 ವಿರೋಧಪಕ್ಷದವರ ಮೇಲೆ ರೈಡ್ ಆಗಿವೆ ಎಂದರು.