ನೀರು ನಿಲ್ಲದಂತೆ ಎಚ್ಚರವಹಿಸಿ ಸ್ವಚ್ಛತೆ ಕಾಪಾಡಿ

ನವಲಗುಂದ,ಜು೨೭ : ದಿನೇ ದಿನೇ ಡೆಂಗಿ ಪ್ರಕರಣಗಳು ಹೆಚ್ಚತ್ತಿದ್ದು ನೀರು ನಿಲ್ಲದಂತೆ ಎಚ್ಚರವಹಿಸಿ, ಎಲ್ಲೆಡೆ ಸ್ವಚ್ಛತೆ ಕಾಪಾಡಿ ಎಂದು ತಹಶೀಲ್ದಾರ್ ಸುಧೀರ ಸಾಹುಕಾರ ಹೇಳಿದರು.
ನಗರದ ಗವಿಮಠದ ಆವರಣದಲ್ಲಿ ತಾಲ್ಲೂಕಾ ಆಡಳಿತದಿಂದ ರೋಗ ನಿಯಂತ್ರಣ ಪರಿಶೀಲನಾ ಕಾರ್ಯ ಉದ್ದೇಶಿಸಿ ಮಾತನಾಡಿದ ಅವರು ಡೆಂಗಿ/ಜಿಕಾ/ಚಿಕುನ್ ಗುನ್ಯಾ ನಿಯಂತ್ರಣಕ್ಕೆ ತಾಲೂಕ ಆಡಳಿತ ಸನ್ನದ್ದವಾಗಿದ್ದು ನಮ್ಮ ಜೊತೆಗೆ ಸಾರ್ವಜನಿಕರು ಕೈಜೋಡಿಸಿದಾಗ ಇಂತಹ ಕಾಯಿಲೆಗಳನ್ನು ತಡೆಯಲು ಸಾಧ್ಯ ಎಂದರು.
ಅಳಗವಾಡಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಅವಿನಾಶ ಎಸ್. ಜಿ. ಮಾತನಾಡಿ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಔಷಧಿಯಿಲ್ಲ ಬರದಂತೆ ನಿಯಂತ್ರಣ ಮಾಡುವುದೇ ಮುಖ್ಯ ಔಷಧಿಯಾಗಿದೆ ಎಂದರು
ಗವಿಮಠದ ಬಸವಲಿಂಗ ಶ್ರೀಗಳು ಡೆಂಗಿ ಜ್ವರ ಜಾಗೃತಿ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪರಿಶೀಲನೆ ಮಾಡಿ ಮನೆಯ ಮಾಲೀಕರಿಗೆ ಮನೆಯ ಮುಂಭಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿ ಡೆಂಗಿ ಜಾಗೃತಿ ಬಿತ್ತಿ ಪತ್ರ ನೀಡಲಾಯಿತು.
ತಾಲ್ಲೂಕಿನ ೧೬ ಗ್ರಾಮ ಪಂಚಾಯತಿಯ ವ್ಯಾಪ್ತಿಯ ೩೮ ಗ್ರಾಮಗಳಲ್ಲಿ ತಾಲ್ಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಸಹಯೋಗದೊಂದಿಗೆ ಡೆಂಗಿ ಜ್ವರ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಜರುಗಿತು.
ಈ ವೇಳೆಯಲ್ಲಿ ತಾ.ಪಂ ಸಿಬ್ಬಂದಿಗಳು, ಆರಕ್ಷಕ ವೃತ್ತ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶುಅಭಿವೃದ್ಧಿ ಯೋಜನಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು