ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ
ಕಲಬುರಗಿ,ಜು.27: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಕಲಬುರಗಿ ನಗರದಲ್ಲಿ ವಿವಿಧ ಇಲಾಖೆಯಡಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಅರಂಭದಲ್ಲಿ ಗುಲಬರ್ಗಾ ವಿ.ವಿ. ಆವರಣದಲ್ಲಿ ಪ್ರಸಕ್ತ ಆಯವ್ಯಯದಲ್ಲಿ ಘೋಷಿಸಲಾದ ವಚನ ಮಂಟಪ ಸ್ಥಾಪನೆಗೆ ಮತ್ತು ಜಿ.ಟಿ.ಸಿ.ಸಿ ಕೌಶಲ್ಯ ಕೇಂದ್ರಕ್ಕೆ ಜಾಗ ವೀಕ್ಷಿಸಲಾಯಿತು. ತದನಂತರ ವಿ.ವಿ. ಆವರಣದಲ್ಲಿಯೇ ಸುಮಾರು 82.56 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ತಲಾ 500 ಬಾಲಕ-ಬಾಲಕೀಯರ ಸಾಮರ್ಥ್ಯದ
ಪಂಡಿತ್ ದೀನ ದಯಾಳ ಸೌಹಾರ್ದ
ವಸತಿ ನಿಲಯ ಬಹುಮಹಡಿ ಸಮುಚ್ಛಯ ಕಟ್ಟಡ ವೀಕ್ಷಿಸಿದರು.
ನಂತರ ಐ.ಟಿ-ಬಿ.ಟಿ ಇಲಾಖೆಯಿಂದ ಎಲೆಕ್ಟ್ರಾನಿಕ್ ಕ್ಲಸ್ಟರ್ ಸ್ಥಾಪನೆಗೆ
ಕುಸನೂರ ಮತ್ತು ಹಡಗಿಲ್ ಹಾರುತಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ವಚನ ಮಂಟಪ/ ಮ್ಯೂಸಿಯಂ ಸ್ಥಾಪನೆಗೆ ಕೆರೆ ಭೋಸಗಾ ಬಳಿ ಜಮೀನು ಸಹ ವೀಕ್ಷಿಸಲಾಗಿದೆ. ಇಲ್ಲಿ ವಚನ ಮಂಟಪ ಸ್ಥಾಪನೆಯಾದರೆ ಕೆರೆ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಅಭಿಪ್ರಾಯಕ್ಕೆ ಬರಲಾಯಿತು.
ಕೆ.ಆರ್.ಐ.ಡಿ.ಎಲ್. ಕಾಮಗಾರಿ ಪರಿಶೀಲನೆ:
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೆ.ಆರ್.ಐ.ಡಿ.ಎಲ್. ಕಾಮಗಾರಿಗಳನ್ನು ಸಹ ಪರಿಶೀಲಿಸಿ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಐ.ಜಿ.ಪಿ. ಅಜಯ್ ಹಿಲೋರಿ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಡಿ.ಸಿ.ಎಫ್. ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಸುಭಾಷ, ಡಿ.ಡಿ.ಎಲ್.ಆರ್ ಪ್ರವೀಣ ಜಾಧವ, ತಹಶೀಲ್ದಾರ ನಾಗಮ್ಮ ಕಟ್ಟಿಮನಿ ಸೇರಿದಂತೆ ಅನೇಕ ಅಧಿಕಾರಿಗಳಿದ್ದರು.