ಎಸ್‌ಆರ್‌ಜಿ ಶಾಲಾ ಮಕ್ಕಳಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ
ಆಳಂದ:ಜು.27: ಪಟ್ಟಣದ ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲಾ ಮಕ್ಕಳಿಂದ ಶುಕ್ರವಾರ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಾರ್ಗಿಲ್ ಯುದ್ಧದ 25ನೇ ವಿಜಯೋತ್ಸವದ ಆಚರಣೆಯ ಅಂಗವಾಗಿ ಫ್ಲಾö್ಯಶ್ ಮಾಬ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಕಾರ್ಗಿಲ್ ವಿಜಯೋತ್ಸವ ದಿನ ಆಚರಣೆ ಮಾಡುವುದರ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹಾಗೂ ಶ್ರೀರಾಮ ಮಾರುಕಟ್ಟೆ ಆವರಣದ ಪ್ರದೇಶದಲ್ಲಿ ದೇಶಭಕ್ತಿಯ ಗೀತೆಗಳೊಂದಿಗೆ ನೃತ್ಯ ಪ್ರದರ್ಶಿಸಿದರು.
ಆಳಂದ ಪಟ್ಟಣದ ಬಸ್ ನಿಲ್ದಾಣ ಮತ್ತು ಶ್ರೀರಾಮ ಮಾರುಕಟ್ಟೆ ಆವರಣದ ಮುಂದೆ ಸೇರಿದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ದೇಶಭಕ್ತಿಯ ಗೀತೆಗಳಿಗೆ ನೃತ್ಯ ಮಾಡುವುದರ ಮೂಲಕ ಯೋಧರಿಗೆ ಗೌರವ ಸಲ್ಲಿಸಿ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷ ಆಚರಿಸಿದರು.
ವೀರ ಮರಣ ಹೊಂದಿದ ಯೋಧರ ಭಾವಚಿತ್ರಗಳು ಹಾಗೂ ದೇಶ ಪ್ರೇಮದ ಭಿತ್ತಿ ಪತ್ರಗಳು ಸಾರ್ವಜನಿಕರ ಗಮನ ಸೆಳೆದವು. ಜಿಟಿ ಜಿಟಿ ಮಳೆಯಲ್ಲೂ ಉತ್ಸಾಹದಿಂದ ನೃತ್ಯ ಮಾಡಿದ ವಿದ್ಯಾರ್ಥಿಗಳನ್ನು ಕಂಡು ಸಾರ್ವಜನಿಕರು ಪ್ರಶಂಸೆಯ ಸುರಿಮಳೆಗೈದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಸಿದ್ಧಲಿಂಗ ಮಲಶೆಟ್ಟಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ದೇಶಪ್ರೇಮ ಬೆಳಸಿದರೆ ಮುಂದೆ ಮಕ್ಕಳು ದೇಶ ಸೇವೆಯಲ್ಲಿ ಅಭಿಮಾನದಿಂದ ಪಾಲ್ಗೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ಯುವಕರು ಯಾವುದೆ ಹುದ್ದೆ ಆಯ್ಕೆ ಮಾಡಿಕೊಳ್ಳಿ, ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ. ಆದರೆ ತಮ್ಮ ವೃತ್ತಿಯ ಗೌರವದ ಜೊತೆಗೆ ದೇಶಭಕ್ತಿ ಮೈಗೂಡಿಸಿಕೊಂಡು ದೇಶ ಸೇವೆ ಮಾಡಬೇಕು ಎಂದರು.
ಯೋಧರು ಹಿಮಾವೃತ ಪ್ರದೇಶ, ವಿಪರಿತ ಚಳಿ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿಯೂ ಜೀವದ ಹಂಗನ್ನು ತೊರೆದು, ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ, ಹಗಲು – ರಾತ್ರಿಯೆನ್ನದೆ ದೇಶದ ರಕ್ಷಣೆಗೆ ಸದಾ ಕಂಕಣಬದ್ಧವಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಸೈನಿಕರಿಗೆ ದೇಶವೇ ತಮ್ಮ ಪರಿವಾರವೆಂಬ ಭಾವನೆಯಿರುತ್ತದೆ. ಭಾರತೀಯರ ಸೈನಿಕರು ವಿಶ್ವದಲ್ಲಿಯೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಸೇವೆ ಅನನ್ಯ, ಸೈನಿಕ ವೃತ್ತಿಯ ಬಗ್ಗೆ ನಿರ್ಲಕ್ಷ್ಯ ವಹಿಸದೆ ಯುವಕರು ದೇಶ ಸೇವೆಗೆ ಸಿದ್ಧರಾಗಬೇಕು ಎಂದು ಕಾರ್ಗಿಲ್ ಯುದ್ಧ ಜರುಗಿದ ಮತ್ತು ಅಲ್ಲಿ ತಾವು ಸಲ್ಲಿಸಿದ ಸೇವೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆಯಲ್ಲಿರುವ ಆಳಂದ ತಾಲೂಕಿನ ಸಿದ್ಧಲಿಂಗ ಮಲಶೆಟ್ಟಿ, ರಾಜು ಕೊರಳ್ಳಿ, ರಾಜಶೇಖರ ನಂದರ್ಗಿ, ಮಡಿವಾಳಪ್ಪ ಕೆರಮಗಿ, ರವಿ ಕಾಂಬಳೆ, ಸಂತೋಷ ಗುತ್ತೇದಾರ, ಉಲ್ಲಾಸ ಸಿಂಗೆ, ಧನರಾಜ ಪವಾರ, ಬಸವೇಶ್ವರ ಸಲಗರೆ, ರಾಜು ಸಿಂಗೆ, ಮಾಣಿಕರಾವ ಬಿರಾದಾರ, ಹಣಮಂತ ಪಾತಾಳೆ, ಸಂತೋಷ ಪಾಟೀಲ, ವಿರಾಟ ಪಾಟೀಲ, ಸಿದ್ದಣ್ಣ ಪಾಟೀಲ ಅವರನ್ನು ಸಂಸ್ಥೆಯ ವತಿಯಿಂದ ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಕ್ ಸನ್ಮಾನಿಸಿ ಗೌರವಿವಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.