ಡಿಸಿಸಿ ಬ್ಯಾಂಕ್ ಸಾಲಮನ್ನಾ ಹಣ ದುರುಪಯೋಗ ಆರೋಪ ಸುಳ್ಳು
ಕೋಲಾರ,ಜು,೨೭- ರಾಜ್ಯ ಸರಕಾರ ೨೦೧೮-೧೯ ನೇ ಸಾಲಿನಲ್ಲಿ ಘೋಷಿಸಿದ್ದ ೧ ಲಕ್ಷ ರೂ ಅಲ್ಪಾವಧಿ ಬೆಳೆ ಸಾಲ ಮನ್ನಾ ಯೋಜನೆಯಡಿ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಚಿಂತಾಮಣಿ ಶಾಖೆಯಲ್ಲಿ ೧೧ ಕೋಟಿ ರೂ ಸಾಲ ಮನ್ನಾದ ಮೊತ್ತವು ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಿದೆ ಎಂದು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎನ್.ಶೀಲಾ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ತಳಗವಾರ ಟಿ.ಎಸ್.ಪ್ರತಾಪ್ ಎಂಬುವರು ಜೂನ್.೨೬, ೨೦೨೪ ರಲ್ಲಿ ಡಿಸಿಸಿ ಬ್ಯಾಂಕಿನ ಚಿಂತಾಮಣಿ ಶಾಖೆಯಲ್ಲಿ ೧೧ ಕೋಟಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಶಾಖಾ ವ್ಯವಸ್ಥಾಪಕ ಜಿ.ಚಂದ್ರಶೇಖರ್ ಮತ್ತು ಇತರರ ಮೇಲೆ ದೂರು ನೀಡಿ ಎಫ್‌ಐಆರ್ ಮಾಡಿಸಿದ್ದರು.
ದೂರಿನ ಅನ್ವಯ ಜಿ.ಚಂದ್ರಶೇಖರ್ ಇತರರು ರೈತರ ಸಾಲ ಮನ್ನಾದ ೧೧ ಕೋಟಿ ರೂಪಾಯಿಗಳನ್ನು ರೈತರ ನಕಲಿ ಖಾತೆಗಳ ಸೃಷ್ಠಿಸಿ ಬ್ಯಾಂಕಿಗೆ ಮತ್ತು ಸರಕಾರಕ್ಕೆ ವಂಚನೆ ಮಾಡಿದ್ದರೂ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ ಬ್ಯಾಂಕಿಗೆ ನಷ್ಟ ಉಂಟು ಮಾಡಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿದ್ದಾದರೆಂದು ಆರೋಪಿಸಿದ್ದರು.
ಅವ್ಯವಹಾರದ ಆರೋಪ ಕೇಳಿ ಬಂದು ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಸರಕಾರವು ಡಿಸಿಸಿ ಬ್ಯಾಂಕ್‌ಗೆ ವಿವರಣೆ ನೀಡುವಂತೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎನ್.ಶೀಲಾ ಅವರು, ಈ ಪ್ರಕರಣ ಸಂಬಂಧ ೨೦೧೮-೧೯ ರಿಂದ ಇಲ್ಲಿಯವರೆವಿಗೂ ಬ್ಯಾಂಕಿನ ಆಂತರಿಕ ಪರಿವೀಕ್ಷಣಾಧಿಕಾರಿಗಳು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು ಕೈಗೊಂಡ ಕ್ರಮಗಳ ಕ್ರೂಢೀಕೃತ ವರದಿಯನ್ನು ಜುಲೈ.೧೫, ೨೦೨೪ ರಂದು ಸರಕಾರಕ್ಕೆ ನೀಡಿದ್ದಾರೆ.
ಈ ವರದಿಯಲ್ಲಿ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಹಣವು ರೈತರ ಖಾತೆಗಳಿಗೆ ಜಮಾ ಆಗಿದೆ, ಶಾಖಾ ವ್ಯವಸ್ಥಾಪಕ ಜಿ.ಚಂದ್ರಶೇಖರ್‌ರ ನಿರ್ಲಕ್ಷ್ಯ ಹಾಗೂ ಅಧಿಕಾರ ದುರುಪಯೋಗದಿಂದ ಬ್ಯಾಂಕಿನ ಸಂಪನ್ಮೂಲಗಳಿಗೆ ತಾತ್ಕಾಲಿಕ ಅವಧಿಗೆ ಧಕ್ಕೆ ಉಂಟಾಗಿದ್ದರಿಂದ ಬ್ಯಾಂಕಿನ ಆಡಳಿತ ಮಂಡಳಿ ಸಭಾ ನಡವಳಿ ರೀತ್ಯಾ ಇವರಿಗೆ ಕಠಿಣ ದಂಡನೆಯ ಶಿಕ್ಷೆ ವಿಧಿಸಿ, ಹಿರಿಯ ಸಹಾಯಕರ ಹುದ್ದೆಯಿಂದ ಕಿರಿಯ ಸಹಾಯಕರ ಹುದ್ದೆಗೆ ಹಿಂಬಡ್ತಿ ನೀಡಿ ೧೧.೦೧.೨೦೦೧ ರಲ್ಲಿಯೇ ಆದೇಶ ಹೊರಡಿಸಲಾಗಿದೆಯೆಂದು ಸ್ಪಷ್ಟವಡಿಸಿದ್ದಾರೆ.
ಡಿಸಿಸಿ ಬ್ಯಾಂಕಿನ ಆರ್ಥಿಕ ಸಂಪನ್ಮೂಲ ತಾತ್ಕಾಲಿಕ ಅವಗೆ ದುರಬಳಕೆಯಾಗಿದ್ದನ್ನು ಪತ್ತೆ ಹಚ್ಚಿ ಬಡ್ಡಿ ಸಮೇತ ಬ್ಯಾಂಕಿಗೆ ಮುಂದಿನ ದಿನಾಂಕಗಳಲ್ಲಿ ಮರು ಪಾವತಿಯಾಗಿದೆ ಎಂದು ಪರಿವೀಕ್ಷಣಾ ವರದಿ ದೃಢಪಡಿಸಿದೆ.
ವರದಿಯ ಪ್ರಕಾರ, ದಿನಾಂಕ ೦೮.೧೨.೨೦೧೮ರಿಂದ ೨೪.೦೬.೨೦೨೦ ರ ಅವಧಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘಗಳಾದ ಕುರುಬೂರು, ಯಮಲಪಾಡಿ, ಯಗವಕೋಟೆ, ನಂದಿಗಾನಹಳ್ಳಿ, ಟಿ.ಗೊಲ್ಲಹಳ್ಳಿ, ಬೊಮ್ಮೇನಹಳ್ಳಿ ಹಾಗೂ ಪಾಲಗುಮ್ಮನಹಳ್ಳಿ ಸಂಘಗಳಿಂದ ರಿಸೀವಲ್ ಖಾತೆಗೆ ಕೃತಕ ಖರ್ಚು ಸಂಘದ ಚಾಲ್ತಿ ಖಾತೆಗೆ ಜಮಾ ಮಾಡಿದ ೯೯೩.೬೨ ಲಕ್ಷ ರೂ ಮತ್ತು ಇದರ ಶೇ.೬ ರಂತೆ ಬಡ್ಡಿ ೩೨.೯೫ ಲಕ್ಷ ರೂಪಾಯಿಗಳನ್ನು ವಸೂಲು ಮಾಡಲಾಗಿದೆಯೆಂದು ಪರಿವೀಕ್ಷಣಾ ವರದಿ ಸ್ಪಷ್ಟಪಡಿಸಿದೆ.