ತೆಂಗಿನಕಾಯಿ ಮಾರುಕಟ್ಟೆ ದರದಲ್ಲಿ ‘ತಕಧಿಮಿತ’
ಪುತ್ತೂರು; ಕಲ್ಪವೃಕ್ಷಕ್ಕೆ ತುಳುನಾಡಿನಲ್ಲಿ ವಿಶೇಷ ಪ್ರಾಧಾನ್ಯತೆ. ಆದರೆ ತೆಂಗಿನಕಾಯಿ ರೈತನ ಆರ್ಥಿಕ ಶಕ್ತಿಯನ್ನು ಕಾಪಾಡುವಷ್ಟು ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ವಸ್ತುವಾಗಿರಲಿಲ್ಲ. ಇದೀಗ ಕಳೆದ ಎರಡು ದಿನಗಳಿಂದ ತೆಂಗಿನಕಾಯಿ ದರ ರೂ.೫೦ಕ್ಕೇರಿದ್ದು, ಶನಿವಾರ ಮತ್ತೆ ದರ ಇಳಿಯುವ ಮೂಲಕ ಮಾರುಕಟ್ಟೆಯಲ್ಲಿ ಬೆಲೆಯ ‘ತಕಧಿಮಿತ’ ಆರಂಭಗೊಂಡಿದೆ.
ಸಾಮಾನ್ಯವಾಗಿ ಕಳೆದ ಕೆಲ ವರ್ಷಗಳಿಂದ ತೆಂಗಿನಕಾಯಿ ದರ ರೂ.೩೨ ತನಕ ಏರಿಕೆಯಾಗಿತ್ತು. ಬಳಿಕ ಕುಸಿತವಾಗುತ್ತಿತ್ತು. ಕಳೆದ ತಿಂಗಳು ರೂ.೨೫ಕ್ಕೆ ಕುಸಿತವಾಗಿತ್ತು. ಆದರೆ ವಾರದ ಹಿಂದೆ ಈ ದರ ಮಾರುಕಟ್ಟೆಯಲ್ಲಿ ಏರಿಕೆಯಾಗುವ ಮೂಲಕ ತೆಂಗು ಬೆಳೆಗಾರನ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಇದೀಗ ಮತ್ತೆ ದರ ಇಳಿಕೆಯಾಗಿದೆ. ಬೆಳೆಯ ಈ ಏರಿಳಿತ ರೈತವರ್ಗದಲ್ಲಿ ಆತಂಕ ಸೃಷ್ಟಿಸಿದೆ.
ದರ ಏರಿಕೆಗೆ ಕೊಬ್ಬರಿ ಎಣ್ಣೆ ಹಾಗೂ ತೆಂಗಿನ ಕಾಯಿಯ ಪುಡಿಯ ದರ ಮಾರುಕಟ್ಟೆಯಲ್ಲಿ ಹೆಚ್ಚಾಗಿರುವುದೇ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈಗ ದರ ಏರಿಕೆಯ ಹಿನ್ನಲೆಯಲ್ಲಿ ತೆಂಗಿನಕಾಯಿ ವ್ಯಾಪಾರಿಗಳು ರಾಜ್ಯದ ಬೇಡಿಕೆ ಇರುವ ಜಿಲ್ಲೆಗಳಿಗೆ ಸಾಗಾಟ ನಡೆಸಲು ಮುಂಗಡ ಹಣ ನೀಡಿ ತೆಂಗಿನಕಾಯಿ ಖಾದಿರಿಸಿದ್ದಾರೆ ಎನ್ನಲಾಗಿದ್ದು, ದರ ಇಳಿಕೆಯಿಂದ ಈ ವ್ಯಾಪಾರಿಗಳಿಗೂ ಸಂಕಷ್ಟ ಉಂಟಾಗಿದೆ.
ಇಳುವರಿ ಕಡಿಮೆ
ತೆಂಗಿನಕಾಯಿ ಇಳುವರಿ ಈ ವರ್ಷ ತುಂಬಾ ಕಡಿಮೆಯಾಗಿದ್ದು, ನುಸಿರೋಗ ಹಾಗೂ ಮಂಗಗಳ ಕಾಟ ಇದಕ್ಕೆ ಕಾರಣವಾಗಿದೆ. ತೆಂಗಿನ ತೋಟ ಹೊಂದಿರುವ ರೈತರು ಅಲ್ಪಸಂಖ್ಯೆಯಲ್ಲಿರುವುದು ಇದಕ್ಕೆ ಮತ್ತೊಂದು ಕಾರಣವಾಗಿದೆ. ಇಂತಹ ತೆಂಗಿನ ತೋಟ ಹೊಂದಿರುವ ರೈತರು ಎಳೆನೀರಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನಲೆಯಲ್ಲಿ ತೆಂಗಿನ ಮರಗಳಿಂದ ಎಳನೀರು ಮಾರಾಟ ಮಾಡುತ್ತಿರುವುದು ತೆಂಗಿನಕಾಯಿ ಕೊರತೆಗೆ ಇನ್ನೊಂದು ಕಾರಣವಾಗಿದೆ. ಅಡಿಕೆ ತೋಟ್ಳ ಸುತ್ತ ತೆಂಗಿನ ಮರ ನೆಟ್ಟುಕೊಂಡಿರುವ ರೈತರು ತೆಂಗಿನಕಾಯಿಗಳನ್ನು ಮಾರಾಟ ಮಾಡುವ ಚಿಂತನೆ ಹೊಂದಿರುವುದಿಲ್ಲ. ತಮಗೆ ಮನೆ ಖರ್ಚಿಗೆ ಬೇಕಾದ ತೆಂಗಿನಕಾಯಿಗಳನ್ನು ಇಟ್ಟುಕೊಂಡು ಉಳಿದ ತೆಂಗಿನ ಕಾಯಿಗಳನ್ನು ಒಣಗಿಸಿ ಅದರಿಂದ ಕೊಬ್ಬರಿ ಎಣ್ಣೆ ಮಾಡಿಸುತ್ತಾರೆ. ತೆಂಗಿನ ತೋಟಗಳನ್ನು ಹೊಂದಿದ ರೈತರು ಮಂಗಗಳ ಕಾಟದಿಂದ ಶೇ.೫೦ ತೆಂಗಿನ ಕಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಎಳನೀರು (ಬೊಂಡ) ಮಾರಾಟದಿಂದ ಆರ್ಥಿಕ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ತೆಂಗಿನಮರಗಳಿಗೆ ಕಾಡುತ್ತಿರುವ ನುಸಿರೋಗದ ಭಾದೆ ರೈತರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಈ ರೋಗದ ಸರಿಯಾದ ಔಷಧಿ ಸಿಂಪಡಣೆ ಅಸಾಧ್ಯವಾಗಿರುವ ಹಿನ್ನಲೆಯಿಂದ ರೈತರ ತೆಂಗಿನಕಾಯಿ ಇಳುವರಿಯಲ್ಲಿ ದೊಡ್ಡಪ್ರಮಾಣದ ನಷ್ಟ ಉಂಟಾಗುತ್ತಿದೆ. ಆದರೆ ದರ ಏರಿಕೆ ಹೆಚ್ಚಾದರೆ ಮುಂದಿನ ವರ್ಷ ರೈತರು ಎಳನೀರು ಮಾರಾಟವನ್ನು ನಿಲ್ಲಿಸುವ ಸಾಧ್ಯತೆ ಮಾತ್ರ ಹೆಚ್ಚಾಗಿದೆ. ತೆಂಗಿನಕಾಯಿ ಬೆಲೆಯ ಏರಿಕೆ ಸ್ಥಿರ ಪಟ್ಟರೆ ಮಾತ್ರ ಈ ಸಾಧ್ಯತೆ. ಈ ರೀತಿಯ ಏರಿಳಿತವಾದರೆ ತೆಂಗಿನಕಾಯಿ ಬೆಳೆಗಾರರಲ್ಲಿ ಆಸಕ್ತಿ ಕುಸಿತವಾಗಿ ಇಳುವರಿ ಹೆಚ್ಚಾಗುವುದು ಸಾಧ್ಯವಿಲ್ಲ ಎಂಬುವುದು ರೈತವರ್ಗದ ಅಭಿಪ್ರಾಯ.