ಈಚನೂರು ಕೆರೆಗೆ ಹೇಮಾವತಿ ಹರಿಸಲು ಒತ್ತಾಯ
ತಿಪಟೂರು, ಜು. ೨೭- ಹೇಮಾವತಿ ನಾಲೆಯಿಂದ ತಾಲ್ಲೂಕಿನ ಈಚನೂರು ಕೆರೆಗೆ ಹಾಗೂ ನಗರದ ಅಮಾನಿಕೆರೆಗೆ ಮತ್ತು ತಾಲ್ಲೂಕಿನ ಕೆರೆಕಟ್ಟೆಗಳಿಗೆ ತಕ್ಷಣವೇ ನೀರು ಹರಿಸಬೇಕು ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಕಳೆದ ವರ್ಷ ತೀವ್ರ ಬರದಿಂದ ನಲುಗಿದ್ದು, ಕೆರೆ ಕಟ್ಟೆಗಳು ನೀರಿಲ್ಲದೆ ಬತ್ತಿ ಹೋಗಿದ್ದವು ಪ್ರತಿ ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ಎದುರಾಗಿತ್ತು. ಕಳೆದ ವರ್ಷದ ನಿರ್ಲಕ್ಷದಿಂದ ಈಚನೂರು ಕೆರೆಗೆ ನೀರು ತುಂಬಿಸದ ಪರಿಣಾಮ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿತ್ತು ಆದ್ದರಿಂದ ಈ ಬಾರಿಯೂ ಅದೇ ಪರಿಸ್ಥಿತಿಗೆ ಅವಕಾಶ ಮಾಡಿಕೊಡದೆ ಹೆಚ್ಚುವರಿ ಪಂಪ್‌ಗಳನ್ನು ಅಳವಡಿಸಿ ನೀರು ತುಂಬಿಸುವ ಕಾರ್ಯಕ್ಕೆ ಕ್ರಮ ಕೈಗೊಂಡು ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಹೇಮಾವತಿ ನೀರನ್ನು ಕೆರೆ ಕಟ್ಟೆಗಳಿಗೆ ಹರಿಸುವ ವಿಚಾರದಲ್ಲಿ ನಿರ್ಲಕ್ಷವಹಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.