ಹದಿಹರೆಯದವರಿಗೆ ನಿರ್ಧಿಷ್ಟ ಗುರಿ ಮುಖ್ಯ
ಹುಳಿಯಾರು, ಜು. ೨೭- ಹದಿ ಹರೆಯ ಎನ್ನುವುದು ಅತ್ಯಂತ ಶಕ್ತಿ ಇರುವ ಕಾಲ. ಹದಿ ಹರೆಯಕ್ಕೆ ಚಂಚಲತೆ ಇರುವುದು ಸಹಜವಾದರೂ ಗುರಿ ಇರಬೇಕು. ದೇಹವನ್ನು ಆರೋಗ್ಯವಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳುವ ಅವಶ್ಯಕತೆ ಇದೆ ಎಂದು ಚಿಕ್ಕನಾಯಕನಹಳ್ಳಿ ಸಾಯಿಗಂಗಾ ಆಸ್ಪತ್ರೆಯ ಡಾ.ವಿಜಯ ರಾಘವೇಂದ್ರ ಹೇಳಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸೋರಲಮಾವು ಗ್ರಾಮದಲ್ಲಿ ಆಯೋಜಿಸಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಆಹಾರದಲ್ಲಿ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ತರಕಾರಿ ಸಲಾಡ್, ಹಾಲು, ಮೊಸರು, ಎಣ್ಣೆ ಹೀಗೆ ಎಲ್ಲ ಅಂಶಗಳು ಇರಬೇಕು. ಅಲ್ಲದೆ ನಮ್ಮ ಊರಿನ ಸುತ್ತ ಮುತ್ತಲಲ್ಲಿ ಏನು ಬೆಳೆಯುತ್ತದೆಯೋ ಅದನ್ನೇ ಬಳಸಿಕೊಳ್ಳಬೇಕು. ಅದೇ ರೀತಿ ನಾವೇ ನಮ್ಮ ಆಹಾರ ಬೆಳೆದುಕೊಳ್ಳಲು ಪ್ರಯತ್ನಿಸಬೇಕು ಎಂದರು.
ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕಿ ಡಾ.ಸುಷ್ಮಾ ಎಲ್. ಬಿರಾದಾರ್ ಮಾತನಾಡಿ, ಯುವ ಜನಾಂಗ ಅತಿಯಾಗಿ ಮೊಬೈಲ್ ಬಳಸುತ್ತಿದ್ದಾರೆ. ರೀಲ್ಸ್, ಫೇಸ್ಬುಕ್, ಇನ್ಸ್‌ಸ್ಟಾಗ್ರಾಮ್ ಇವೆಲ್ಲ “ಪರ್ಫೆಕ್ಟ್ ಲೈಫ್ನ ಸುಳ್ಳು ಭ್ರಮೆಯನ್ನು, ಅದೇ ರೀತಿ ಬದುಕಬೇಕಾದ ಒತ್ತಡವನ್ನು ಸೃಷ್ಟಿಸುತ್ತಿವೆ. ಹೀಗಾಗಿ ಹಲವಾರು ವಿದ್ಯಾರ್ಥಿಗಳು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಮಾನಸಿಕ, ದೈಹಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಲು ವಿದ್ಯಾರ್ಥಿಗಳು ಒಳ್ಳೆಯ ಆಹಾರ, ಯೋಗ, ವ್ಯಾಯಾಮ ಹೀಗೆ ಚಟುವಟಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಸಂಚಾಲಕರುಗಳಾದ ಡಾ.ಜಯಶ್ರೀ ಬಿ., ಪ್ರೊ. ಮಲ್ಲಿಕಾರ್ಜುನ್, ,ಸಹ ಶಿಬಿರಾಧಿಕಾರಿಗಳಾದ ತಿಪ್ಪೇಸ್ವಾಮಿ, ಅಮ್ಜದ್‌ಪಾಷ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ರೇಖಾ, ರಾಜೇಶ್ವರಿ, ಲತಾ ಪ್ರಾರ್ಥಿಸಿದರು. ಸಿದ್ದೇಶ್ ಸ್ವಾಗತಿಸಿದರು. ಭಾವನಾ ಸಿ.ಕೆ ವಂದಿಸಿದರು.
ಕಾರ್ಯಕ್ರಮದ ಭಾಗವಾಗಿ ಸಾಯಿಗಂಗಾ ಹಾಸ್ಪಿಟಲ್‌ನಿಂದ ನಡೆದ ಉಚಿತ ತಪಾಸಣಾ ಶಿಬಿರದಲ್ಲಿ ೪೬ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಪ್ರಯೋಜನ ಪಡೆದುಕೊಂಡರು. ಈ ತಪಾಸಣಾ ಶಿಬಿರದಲ್ಲಿ ಆಸ್ಪತ್ರೆಯ ಡಯಾಗ್ನೋಸಿಸ್ಟ್ ಶ್ರೀನಿವಾಸ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಪೂರ್ಣಿಮಾ ಸಹಕರಿಸಿದರು.