ಹದಗೆಟ್ಟ ನರಸಾಪುರ ರಸ್ತೆ ದುರಸ್ಥಿಗೆ ಒತ್ತಾಯ
ತುಮಕೂರು, ಜು. ೨೭- ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಹೇಮಾವತಿ ನಾಲಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಕೆಸರುಗದ್ದೆಯಾಗಿದ್ದು, ಕೂಡಲೇ ದುರಸ್ಥಿಗೊಳಿಸುವಂತೆ ಶಾಲಾ ಮಕ್ಕಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನರಸಾಪುರ ಗ್ರಾಮದಲ್ಲಿ ಹೇಮಾವತಿ ನಾಲಾ ಅಧಿಕಾರಿಗಳು ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದು, ಪೈಪ್‌ಲೈನ್‌ಗಾಗಿ ರಸ್ತೆಯನ್ನು ಅಗೆದು ಬಿಟ್ಟಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಮಳೆ ಬಂದರೆ ರಸ್ತೆ ಕೆಸರುಗದ್ದೆಯಾಗಿ ಜನತೆ ಓಡಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಹದಗೆಟ್ಟಿದೆ. ಹೇಮಾವತಿ ನಾಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಈ ರಸ್ತೆ ಕೆಸರುಗದ್ದೆಯಾಗಲು ಕಾರಣ ಎಂದು ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಆರೋಪಿಸಿದ್ದಾರೆ.
ಕಳೆದ ೧೦-೧೨ ದಿನಗಳಿಂದ ನಗರ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಈ ಜಿಟಿಜಿಟಿ ಮಳೆಗೆ ಚೆನ್ನಾಗಿರುವ ರಸ್ತೆಗಳೇ ಕೆಸರುಮಯವಾಗುತ್ತವೆ. ಇನ್ನು ಪೈಪ್‌ಲೈನ್‌ಗಾಗಿ ಅಗೆದಿರುವ ರಸ್ತೆಗಳನ್ನಂತೂ ಕೇಳುವಂತೇ ಇಲ್ಲ.
ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ನರಸಾಪುರ ಗ್ರಾಮದ ದೊಡ್ಡಸಿದ್ದಪ್ಪ ಮನೆ ಕಡೆಗೆ ತೆರಳುವ ರಸ್ತೆಯಂತೂ ಕೆಸರುಗದ್ದೆಯಾಗಿದೆ. ನಾವು ಶಾಲೆಗಳಿಗೆ ಹೋಗಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಈ ರಸ್ತೆಯಲ್ಲಿ ದುರಸ್ಥಿಪಡಿಸಿ ಕೊಡುವಂತೆ ಶಾಲಾ ಮಕ್ಕಳು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಗ್ರಾಮದ ರಸ್ತೆ ಕೆಸರುಗದ್ದೆಯಾಗಿರುವುದರಿಂದ ಸಾರ್ವಜನಿಕರು ಸುಗಮವಾಗಿ ಸಂಚರಿಸಲಾಗದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯನ್ನು ಅಗೆದಿರುವ ಹೇಮಾವತಿ ನಾಲಾ ಅಧಿಕಾರಿಗಳು ಈ ರಸ್ತೆ ದುರಸ್ಥಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.