ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಕರೆ
ಪಾವಗಡ, ಜು. ೨೭- ಕನ್ನಡದ ನಾಡಿನ ಋಣವನ್ನು ತೀರಿಸಬೇಕಾದರೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಮೂಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ವೆಂಕಟರವಣಪ್ಪ ಸಲಹೆ ನೀಡಿದರು.
ಕನ್ನಡ ಜ್ಯೋತಿ ಯಾತ್ರೆಯ ರಥವನ್ನು ಬರ ಮಾಡಿಕೊಂಡು ಮಾತನಾಡಿದ ಅವರು, ಕರ್ನಾಟಕದ ಹೆಸರು ನಾಮಕರಣವಾಗಿ ೫೦ ವರ್ಷಗಳ ಸವಿನೆನಪಿಗಾಗಿ ಹಂಪೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದು, ಗಡಿನಾಡಾದ ಪಾವಗಡಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ್ದು ಅತ್ಯಂತ ಸಂತೋಷವಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಕರ್ನಾಟಕ ಸಂಭ್ರಮ ೫೦ ವರ್ಷವಾದ ಹಿನ್ನೆಲೆಯಲ್ಲಿ ಸವಿನೆನಪಿಗಾಗಿ ಈ ಜ್ಯೋತಿಯ ರಥ, ರಾಜ್ಯದ ಮೂಲೆ ಮೂಲೆಗಳಿಗೆ ಸಾಗಿ ಬರುತ್ತಿದ್ದು, ಮುಖ್ಯಮಂತ್ರಿ ದೇವರಾಜ ಅರಸು ರವರ ಕಾಲದಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು. ಕನ್ನಡ ಭಾಷೆಗೆ ಹೆಚ್ಚು ಪ್ರಾತಿನಿದ್ಯ ದೊರಕಿದ್ದು, ವಿಶಾಲ ಮೈಸೂರು ಹೆಸರನ್ನು ಕರ್ನಾಟಕ ಎಂದು ನಾಮಕರಣವಾಯಿತು. ಹಂಪೆಯ ವೈಶಿಷ್ಯವನ್ನು ಈ ರಥದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಡಿ. ವರದರಾಜು ಮಾತನಾಡಿ, ಎಲ್ಲ ತಾಲ್ಲೂಕಿನಲ್ಲಿ ರಥ ಸಾಗಿ ಬರುತ್ತಿದ್ದು, ಪಾವಗಡ ತಾಲ್ಲೂಕಿಗೆ ಪ್ರವೇಶ ನೀಡಿದ್ದರಿಂದ ಹೆಚ್ಚಿನ ಖುಷಿ ತಂದಿದ್ದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಂಘ ಸಂಸ್ಥೆಗಳಿಗೆ ಅಭಿನಂದಿಸಿದರು.
ಇಓ. ಜಾನಕಿರಾಂ ಮಾತನಾಡಿ, ಕನ್ನಡ ಭಾಷೆ ನಮ್ಮ ಅಚ್ಚು ಮೆಚ್ಚಿನ ಭಾಷೆಯಾಗಬೇಕು. ನಮ್ಮ ಜೀವನದ ಒಂದು ಭಾಗ ಕನ್ನಡ ಬಾಷೆಯಾಗಬೇಕು. ಎಲ್ಲ ಇಲಾಖೆಗಳ ಪೂರ್ವ ಸಭೆಯನ್ನು ಮಾಡಿ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖಾ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕುಗಳಿಂತ ಗಡಿನಾಡಾದ ಪಾವಗಡ ತಾಲ್ಲೂಕಿನಲ್ಲಿ ವೀಶೇಷವಾಗಿ ಸ್ವಾಗತಿಸಿದ್ದಿರಾ. ೨ ಸಾವಿರ ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಮಾತನಾಡಬೇಕು. ನಮ್ಮ ಕನ್ನಡ ಭಾಷೆ ಉಳಿಯಬೇಕು. ಕನ್ನಡ ಶಾಲೆಗಳು ಬೆಳೆಯಬೇಕು ಎಂದು ತಿಳಿಸಿದರು.
ತಾ. ಕ.ಸಾ.ಪ. ಅಧ್ಯಕ್ಷರಾದ ಕಟ್ಟಾನರಸಿಂಹಮೂರ್ತಿ, ಬಿ.ಇ.ಒ. ಇಂದ್ರಾಣಮ್ಮ ಮಾತನಾಡಿದರು.
ಸಿರಾ ತಾಲ್ಲೂಕಿನಿಂದ ಬಂದ ರಥವನ್ನು ಅರಸೀಕೆರೆ ಗ್ರಾಮದ ಮೂಲಕ ಸ್ವಾಗತಿಸಿದ ಅಧಿಕಾರಿಗಳು, ಮಂಗಳವಾಡ, ಸಿ.ಕೆ.ಪುರ, ಮಾರ್ಗವಾಗಿ ಪಾವಗಡಕ್ಕೆ ಪ್ರವೇಶ ನೀಡಿದಾಗ ದೇವಲಕೆರೆ ಕ್ರಾಸ್ ಬಳಿ ಸಾವಿರಾರು ವಿದ್ಯಾರ್ಥಿಗಳು ಜೈಕಾರ ಕೂಗಿದರು.
ಮೆರವಣಿಗೆಯಲ್ಲಿ ಗ್ರೇಡ್-೨ ತಹಶೀಲ್ದಾರ್ ಎನ್. ಮೂರ್ತಿ, ಪಿ.ಇ.ಓ. ಬಸವರಾಜು ಸೇರಿದಂತೆ ಎಲ್ಲ ತಾಲ್ಲೂಕು ಮಟ್ಟದ ಅದಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಮಹಿಳಾ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು, ರೈತ ಸಂಘದ ಪದಾಧಿಕಾರಿಗಳು, ಶಾಲಾ ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.