ಸುಸ್ಥಿರ ಕೃಷಿ ಪದ್ಧತಿ ಅಳವಡಿಕೆ ಮೂಲಕ ಕಬ್ಬಿನಲ್ಲಿ ಅಧಿಕ ಇಳುವರಿ ಪಡೆಯಲು ರೈತರಿಗೆ ಕರೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೭: ಕಬ್ಬು ಬೇಸಾಯದಲ್ಲಿ ನಾವು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಂಡರೂ ಸಾಕು ಎಕರೆಗೆ ನೂರಾರು ಟನ್ ಇಳುವರಿ ಪಡೆಯಬಹುದು. ಪ್ರತಿಯೊಂದು ತಳಿಗೂ ತನ್ನದೇ ಆದ ನಿರ್ದಿಷ್ಠ ಹಾಗೂ ಅತ್ಯಧಿಕ ಇಳುವರಿ ನೀಡುವ ನಿಖರ ಮಾನದಂಡ ಇರುತ್ತದೆ. ಅಂತಹ ಇಳುವರಿ ನೀಡುವ ತಳಿಗಳನ್ನು ಗುರುತಿಸಿ ಬೇಸಾಯ ಮಾಡುವುದು ಅಧಿಕ ಇಳುವರಿಯ ಗಳಿಸಲು ಸಾಧ್ಯ ಎಂದು ಮಹಾಲಿಂಗಪೂರ ರೋಹಿಣಿ ಬಯೋಟೇಕ್ ಸಂಸ್ಥಾಪಕ ಡಾ. ಮಲ್ಲಪ್ಪ ಕಟ್ಟಿ ಅವರು ಹೇಳಿದರು.
ನಗರದ ಹಳೇ ಆಸ್ಪತ್ರೆ ಆವರಣದಲ್ಲಿ ಶ್ರೀ ದುರ್ಗಾದೇವಿ ಹಾಗೂ ಕೃಷಿ ವಿವಿ ವಿಜಯಪುರ ಆವರಣ, ಕೃಷಿ ಹಾಗೂ ಕೃಷಿ ಇಲಾಖೆಗಳ ಸಹಯೋಗದಲ್ಲಿ ಜರುಗಿದ ರೈತ ಜಾತ್ರೆಯಲ್ಲಿ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗ ಲಭ್ಯವಿರುವ ಕಬ್ಬಿನ ತಳಿಗಳು, ಭೂ-ಫಲವತ್ತತೆ, ನೀರಿನ ಲಭ್ಯತೆ ಮುಂತಾದ ಮೂಲಭೂತ ವ್ಯವಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಇನ್ನು ಸೂಕ್ತ ಕಾಲದಲ್ಲಿ ನಾಟಿ ಮಾಡುವುದು, ಬೇಸಾಯಕ್ಕೆ ಮೊದಲು ಭೂಮಿಯ ಭೌತಿಕ ರಚನೆಯನ್ನು ಸರಿಮಾಡಿಕೊಳ್ಳುವುದು, ಸಮಯಾನುಸಾರ ಅಗತ್ಯ ಬೇಸಾಯ ಕ್ರಮಗಳನ್ನು ಕೈಗೊಂಡು ಅರಿತು ಬೇಸಾಯ ಮಾಡಿದಲ್ಲಿ ಅತೀ ಸುಲಭವಾಗಿ ಎಕರೆಗೆ ನೂರಾರು ಟನ್ ಕಬ್ಬಿನ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಇಲ್ಲಿ ಪ್ರದರ್ಶಿಸುತ್ತಿರುವ ಸುಮಾರು ೧೨ ತಳಿಗಳು ೧೦೦ ಕ್ಕೂ ಅಧಿಕ ಟನ್ ಇಳುವರಿ ನೀಡುವ ತಳಿಗಳು ೭ ರಿಂದ ೯ ತಿಂಗಳ ಅವಧಿಯ ಬೆಳೆ ಇದ್ದು, ಪ್ರತಿ ಕಬ್ಬು ಕನಿಷ್ಠ ೩ ರಿಂದ ೩.೫ ಕೆಜಿ ತೂಕ ಇದೆ. ಎಕರೆವಾರು ಅಗತ್ಯ ಸಸಿಗಳ ಸಂಖ್ಯೆ ಕಾಪಾಡಿಕೊಂಡು ಇಂತಹ ತಳಿಗಳನ್ನು ಆಯ್ದು ನಾಟಿ ಮಾಡಿದಲ್ಲಿ ಅಧಿಕ ಇಳುವರಿ ನಿಶ್ಚಿತ ಬರಲಿದೆ ಎಂದರು.
ಮೀನುಗಾರಿಕೆ ಉಪಕಸಬು ಕುರಿತು ಭೂತನಾಳ ಮೀನುಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎಸ್. ವಿಜಯಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಮೀನುಗಾರಿಕೆ ಅಳವಡಿಸಿಕೊಳ್ಳಲು ವಿಫುಲ ಅವಕಾಶಗಳಿವೆ. ಕೃಷಿ ಇಲಾಖೆಗಳಿಂದ ಕೃಷಿ ಹೊಂಡ ನಿರ್ಮಿಸಿದ್ದು, ಅವುಗಳಲ್ಲಿ ಮೀನು ಸಾಕಾಣಿಕೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದರು.
ಒಬ್ಬ ರೈತ ತನ್ನ ಜಮೀನಿನಲ್ಲಿ ಅರ್ಧ ಎಕರೆಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಲ್ಲಿ, ಅದರಲ್ಲಿ ವಿವಿಧ ತಳಿಯ ಮೀನು ಸಾಕಾಣೆಯಿಂದ ೧.೫ ಲಕ್ಷ ಆದಾಯ ಗಳಿಸಬಹುದು. ಅರ್ಧ ಎಕರೆಯಲ್ಲಿ ಕೃಷಿ ಬೆಳೆಗಳಿಂದ ಇಷ್ಟು ಲಾಭ ಗಳಿಸುವುದು ಅಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್ ಮಾತನಾಡಿ, ರೈತರು ಇಲಾಖೆಗಳ ಯೋಜನೆಗಳ ಲಾಭ ಪಡೆದು ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಲಹೆ ನೀಡಿದರು. ವಿಚಾರ ಗೋಷ್ಠಿಯಲ್ಲಿ ಮೀನುಗಾರಿಕೆ ಉಪ ನಿರ್ದೇಶಕ ಎಮ್. ಹೆಚ್. ಬಾಂಗಿ, ಶ್ರೀಶೈಲ ಗಂಗನಹಳ್ಳಿ, ಕೆ.ಎಮ್.ಎಫ್. ಸಹಾಯಕ ನಿರ್ದೇಶಕ ಡಾ. ಶಿವಾನಂದ ಅಥಣಿ ಮಾತನಾಡಿದರು.
ಅಮರ ಗರಡುಕರ, ಮಹಾದೇವ ಹಾಲಳ್ಳಿ, ಪ್ರಗತಿಪರ ರೈತರಾದ ಸಿ. ಎಂ.ಹAಡಗಿ, ಬೀರಪ್ಪ ವಗ್ಗಿ, ಎಸ್.ಟಿ. ಪಾಟೀಲ ಸೇರಿದಂತೆ ವಿವಿಧ ಗ್ರಾಮಗಳ ಮೂರು ನೂರು ರೈತರು ಪಾಲ್ಗೊಂಡಿದ್ದರು.
ವೀರಣ್ಣ ಸಜ್ಜನ ಸ್ವಾಗತಿಸಿದರು. ಡಾ. ಆರ್.ಬಿ. ಬೆಳ್ಳಿ ನಿರೂಪಿಸಿದರು. ಜಿ.ಎ. ಸೂರ್ಯವಂಶಿ ವಂದಿಸಿದರು.