ಜ್ಞಾನಾಧಾರಿತ ಸಮಾಜ ಸ್ಥಾಪನೆ-ನಮ್ಮ ಧ್ಯೇಯವಾಗಲಿ: ಉಮಾದೇವಿ ಸೊನ್ನದ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೭: ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯು ವಿಶಾಲವಾಗಿದೆ. ಸಾಂಪ್ರದಾಯಿಕ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ತುಂಬುವುದರ ಮೇಲೆ ಕೇಂದ್ರೀಕರಿಸಿ, ಮಕ್ಕಳ ಜ್ಞಾನವನ್ನು ವಿಸ್ತರಿಸಿ, ವ್ಯಕ್ತಿತ್ವದ ಬೆಳವಣಿಗೆಗೆ ಸಹಕರಿಸಬೇಕು ಎಂದು ಡೈಟ್ ಕಾಲೇಜಿನ ಪ್ರಾಚಾರ್ಯ ಉಮಾದೇವಿ ಸೊನ್ನದ ಹೇಳಿದರು.
ಇಟ್ಟಂಗಿಹಾಳ ರಸ್ತೆಯಲ್ಲಿರುವ ಎಕ್ಸಲೆಂಟ್ ಶಾಲೆಯಲ್ಲಿ ಶುಕ್ರವಾರ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿದ್ಯಾಲಯ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಗತಿವಿಧಿ, ಪ್ರಾಂತ ಮಟ್ಟದ ಶಿಕ್ಷಕ ಸ್ವಾಧ್ಯಾಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಗುಣಮಟ್ಟದ, ಸಾರ್ವತ್ರಿಕ, ಸಮಗ್ರ ಶಿಕ್ಷಣದ ಮೂಲಕ ಸಮಾನ ಜ್ಞಾನಾಧಾರಿತ ಸಮಾಜ ಸ್ಥಾಪಿಸುವಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಡಾ. ಮೀನಾ ಚಂದಾವರಕರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪುನರುತ್ಥಾನದ ಉದ್ದೇಶದಿಂದ ಈ ಸಂಸ್ಥೆಯು ಸಮಗ್ರ ಭಾರತೀಯ ದೃಷ್ಟಿಕೋನದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಕ್ರಮ, ವ್ಯವಸ್ಥೆ ಮತ್ತು ವಿಧಾನಗಳನ್ನು ವಿಕಸಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ಪ್ರಾಂತ ಸಂರಕ್ಷಕÀ ಡಾ. ಸತೀಶ ಜಿಗಜಿನ್ನಿ ಮಾತನಾಡಿ, ಭಾರತೀಯ ಸಂಸ್ಕೃತಿಯು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿತವಾಗಬೇಕು. ಶಿಕ್ಷಣ ಕ್ಷೇತ್ರದ ಪಾಲುದಾರರಾದ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವು ಜಗತ್ತನ್ನು ಬದಲಾಯಿಸಬಲ್ಲ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ಶಿಕ್ಷಣ ವ್ಯವಸ್ಥೆಯ ರೂಪುರೇಷೆಗಳು ರಚನಾತ್ಮಕ ಬದಲಾವಣೆ ಕಂಡುಕೊಳ್ಳುವ ಜತೆಗೆ ಶಿಕ್ಷಣದಲ್ಲಿ ಮಾತೃಭಾಷೆ, ಸಂಸ್ಕೃತಿ, ಜ್ಞಾನ, ಕೌಶಲ ಹಾಗೂ ಉದ್ಯೋಗಾವಕಾಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ನಾಗಪುರದ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಬಿ.ಆರ್. ಶಂಕರಾನAದ, ಜಿಲ್ಲಾಧ್ಯಕ್ಷ ಬಿ.ಎಸ್. ಬಾಪಗೊಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿದ್ದು ಮದರಖಂಡಿ ಸಂಘಟನಾ ಮಂತ್ರ ಹೇಳಿದರು. ಸಹ ಕಾರ್ಯದರ್ಶಿ ಸಂತೋಷ ಬಂಡೆ ನಿರ್ವಹಿಸಿದರು. ಡಾ. ಎಸ್.ಟಿ. ಬೋಳರೆಡ್ಡಿ ವಂದಿಸಿದರು.
ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಡ್ಡದ, ಪ್ರೊ. ರಾಜಕುಮಾರ ಮಾಲಿಪಾಟೀಲ, ಶೀಲಾ ಬಿರಾದಾರ, ರಾಜಶ್ರೀ ಜುಗತಿ, ಪ್ರೊ. ಅಶೋಕ ಸುರಪುರ, ಪ್ರೊ. ಎ.ಬಿ. ಲಕ್ಕಣ್ಣವರ, ಡಾ. ಎಚ್. ವೆಂಕಟೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲೆಯ ೨೦೦ ಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು.