ಜೀವ ವೈವಿಧ್ಯತೆ ಹಾಳಾದರೆ ಮನುಕುಲಕ್ಕೆ ಉಳಿಗಾಲವಿಲ್ಲ: ಶಿವಕುಮಾರ ಶ್ರೀ ಅಭಿಮತ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೭: ಪಂಚಮಹಾಭೂತಗಳಾದ ಭೂಮಿ, ಅಗ್ನಿ, ವಾಯು, ಗಾಳಿ, ನೀರು ಇವುಗಳನ್ನು ನಾವೆಲ್ಲ ಸಂರಕ್ಷಿಸಬೇಕು. ಜೀವ ವೈವಿಧ್ಯತೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಈ ಭೂಮಂಡಲಕ್ಕೆ ಅಪಾಯ ಕಾಯ್ದಿಟ್ಟ ಬುತ್ತಿ ಎಂದು ಕಪ್ಪತಗುಡ್ಡ ನಂದಿವೇರಿ ಸಂಸ್ಥಾನ ಮಠದ ಪೀಠಾದಿಪತಿ ಶಿವಕುಮಾರ ಶ್ರೀಗಳು ಹೇಳಿದರು.
ಶುಕ್ರವಾರ ನಗರದ ಹಳೇ ಆಸ್ಪತ್ರೆ ಆವರಣದಲ್ಲಿ ಶ್ರೀ ದುರ್ಗಾದೇವಿ ಹಾಗೂ ವಿಜಯಪುರ ಕೃಷಿ ಕಾಲೇಜ ಆವರಣದಲ್ಲಿ ಕೃಷಿ ಹಾಗೂ ಕೃಷಿ ಸಂಬAಧಿತ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಅಂತಿಮ ದಿನದ ರೈತ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವÀಚನ ನೀಡಿದರು.
ಮಣ್ಣು ರೈತನ ಕಣ್ಣು, ಅಮೂಲ್ಯವಾದ ನೈಸರ್ಗಿಕ ಸಂಪತ್ತು. ನೀರು ಎಂದರೆ ಬದುಕು, ಜೀವಜಲ, ಪರಂಪರೆ, ರೈತರ ಸಂಸ್ಕೃತಿ ಪ್ರತೀಕ. ಕಾರಣ ಪ್ರತಿಯೊಬ್ಬ ರೈತರು ಇವುಗಳನ್ನು ಸಂರಕ್ಷಿಸಬೇಕು ಎಂದರು.
ಕಪ್ಪತಗುಡ್ಡದಲ್ಲಿ ಅಮೂಲ್ಯವಾದ ಸಸ್ಯ ಸಂಜಿವಿನಿಗಳಿವೆ. ಬಂಗಾರವಿದೆ. ಇಲ್ಲಿ ಅನೇಕ ಔಷಧಿಯ ಸಸ್ಯಗಳ ವನವಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ತಿಳಿಸಿದರು.
ಒಕ್ಕಲುತನ ಮಾಡುವವರು ಸ್ವತಂತ್ರ ರಾಜರು. ಕೃಷಿ ಕಾಯಕದಲ್ಲಿ ಸ್ವಾತಂತ್ರವಿದೆ. ಅದಕ್ಕಾಗಿ ನಾವು ಕೃಷಿಕರನ್ನು ದೇವರಂತೆ ಗೌರವಿಸಬೇಕಾಗಿದೆ ಎಂದು ನುಡಿದರು.
ಮೂರನೇ ದಿನದ ಕೃಷಿ ಗೋಷ್ಠಿಯಲ್ಲಿ ಬೆಂಗಳೂರಿನ ಔಷಧೀಯ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಜಗನ್ನಾಥರಾವ ವಿಶೇಷ ಉಪನ್ಯಾಸ ನೀಡಿ, ಪ್ರಾಚೀನ ಕಾಲದಿಂದ ಔಷಧಿಯ ಸಸ್ಯಗಳ ಉಪಯೋಗದಿಂದ ಅನೇಕ ರೋಗ-ರುಜಿನಗಳಿಂದ ನಮ್ಮ ಪೂರ್ವಜರು ಗುಣವಾಗುತ್ತಿದ್ದರು. ಇಂದು ಆರ್ಯುವೇದ ಪದ್ಧತಿಯಲ್ಲಿ ಔಷಧೀಯ ಹಾಗೂ ಸುಗಂಧ ದ್ರವ್ಯ ಸಸ್ಯಗಳ ಉಪಯೋಗಗಳ ಮಹತ್ವ ಹೆಚ್ಚಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ವಿವಿ ಪ್ರಾಧ್ಯಾಪಕ ಡಾ. ವಸಂತ ಗಾಣಿಗೇರ ತರಕಾರಿ ಬೇಸಾಯದ ಮಹತ್ವದ ಕುರಿತು, ಡಾ. ರಾಮನಗೌಡ ಹೆಚ್. ಅವರು ಜೈವಿಕ ಪೀಡೆನಾಶಕ ಮತ್ತು ಜೈವಿಕ ಗೊಬ್ಬರಗಳ ಕುರಿತು, ಡಾ. ವಿಜಯಕುಮಾರ ನಾರಾಯಣಪೂರ ಅವರು ಔಷಧೀಯ ಸಸ್ಯಗಳ ಬೇಸಾಯ ಕ್ರಮಗಳ ಕುರಿತು ರೈತರೊಂದಿಗೆ ಸಂವಾದ ಮಾಡಿದರು.
ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್ ಅಧ್ಯಕ್ಷತೆ ವಹಿಸಿದ್ದರು.
ರೈತ ಜಾತ್ರೆಯಲ್ಲಿ ೨೬ ವಿವಿಧ ಪರಿಕರ ಮಳಿಗೆಗಳಿಂದ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಮೈಸೂರಿನ ಶಾಂತಾಕೃಷ್ಣ, ಡಾ. ಶಿರೀನ್, ಅಧ್ಯಕ್ಷ ಅಮರ ಗರಡುಕರ, ಮಹಾದೇವ ಹಾಲಳ್ಳಿ, ಪ್ರಗತಿಪರ ರೈತರಾದ ಎಸ್.ಟಿ. ಪಾಟೀಲ, ಶ್ರೀಶೈಲ ಆಳೂರ, ಸಂದೀಪ ಕಾಳೆ, ಸುಹಾಸ ಭಿಸೆ, ಜಿ.ಎ. ಸೂರ್ಯವಂಶಿ, ಸಂಚಾಲಕ ವೀರಣ್ಣ ಸಜ್ಜನ, ಶ್ರೀ ದುರ್ಗಾದೇವಿ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಭಾಗಗಳಿಂದ ರೈತರು ಪಾಲ್ಗೊಂಡಿದ್ದರು. ಡಾ. ಆರ್.ಬಿ. ಬೆಳ್ಳಿ ನಿರೂಪಿಸಿದರು.