ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ ಜು.೨೬; ಭಾರತದ ರಾಷ್ಟ್ರ ಧ್ವಜವು ಸ್ವಾತಂತ್ರ್ಯದ ಸಂಕೇತವಾಗಿದೆ ಪ್ರತಿಯೊಬ್ಬ ಭಾರತೀಯನೂ ಧ್ವಜಕ್ಕೆ ಗೌರವವನ್ನು  ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ನಾಗಭೂಷಣ್  ಅಭಿಪ್ರಾಯಪಟ್ಟರು.   ಭಾರತ ಸೇವಾದಳ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಧ್ವಜದ ಅಂಗೀಕಾರ ದಿನಾಚರಣೆ ಮತ್ತು ಶಿಕ್ಷಕರ  ಪುನಶ್ಚೇತನ ಕಾರ್ಯಗಾರವನ್ನು  ಉದ್ಘಾಟಿಸಿ ಅವರು ಮಾತನಾಡಿದರು.  ಸಾರ್ವಜನಿಕರು ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ಸಂವಿಧಾನ ಇವುಗಳ  ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.  ಶಾಲೆಗಳಲ್ಲಿ ಕಡ್ಡಾಯವಾಗಿ ಸೇವಾದಳ ಘಟಕಗಳು ಸ್ಥಾಪನೆ ಆಗಬೇಕು ಸೇವಾದಳ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆಂದು ಶಿಕ್ಷಕರಿಗೆ ತಿಳಿಸಿದರು.ವಲಯ ಸಂಘಟಕರಾದ ಎಂ. ಅಣ್ಣಯ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿ  ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರ ಧ್ವಜಗಳು ವಿನ್ಯಾಸಗೊಂಡು ಸ್ವಾತಂತ್ರ ಹೋರಾಟದಲ್ಲಿ ಸಲ್ಲಿಸಿದ ಸೇವೆಯ ಕುರಿತು  ಮತ್ತು ಶಾಲೆಗಳಲ್ಲಿ ಶಿಕ್ಷಕರು ಸೇವಾದಲ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ಬಗ್ಗೆ ವಾರ್ಷಿಕ ಮಾಹಿತಿಯನ್ನು ನೀಡಿದರು.  ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದ ಸ್ವಾಮಿ ಅವರು ಮಾತನಾಡಿ ಸೇವಾದಳ ಶಿಕ್ಷಣವನ್ನು ಶಾಲೆಗಳಲ್ಲಿ ಶಿಕ್ಷಕರು ಅನುಷ್ಠಾನಗೊಳಿಸಬೇಕು, ಶಿಕ್ಷಕರಿಗೆ ಸೇವಾದಳ ತರಬೇತಿಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಭಾರಿಯ ದೈಹಿಕ ಶಿಕ್ಷಣ ಪರೀಕ್ಷಕರಾದ ಚನ್ನಬಸಪ್ಪನವರು ಹಿರಿಯ ಕಾರ್ಯಕರ್ತರಾದ ಶಿವಣ್ಣ ಮತ್ತು ಎನ್ . ಕೆ.ರಾಜಪ್ಪನವರು ಮೆಹಬೂಬಿ ಶಿಕ್ಷಕರು  ಉಪಸ್ಥಿತರಿದ್ದರು.  ಅಧ್ಯಕ್ಷತೆಯನ್ನು ತಾಲೂಕ ಅಧ್ಯಕ್ಷರಾದ ಕಾಟ ಮಲ್ಲಪ್ಪನವರು ವಹಿಸಿದ್ದರು.   ಶಿಕ್ಷಕರಾದ ಚಿತ್ತಯ್ಯ  ಕಾರ್ಯಕ್ರಮ ನಿರೂಪಿಸಿದರು, ಮಲ್ಲೇಶ್ ಸ್ವಾಗತಿಸಿದರು,  ಕಲ್ಲೇಶ್ವರ್ ವಂದಿಸಿದರು.