ಕ್ಷಯಮುಕ್ತ ಸಮಾಜ ನಿರ್ಮಿಸೋಣ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೨೭; ಎಲ್ಲರೂ ಒಗ್ಗೂಡಿ ಕ್ಷಯರೋಗದ ವಿರುದ್ಧ ಹೋರಾಟ ನಡೆಸಿ ಕ್ಷಯಮುಕ್ತ ಸಮಾಜ ನಿರ್ಮಿಸೋಣ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ನಗರದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಕ್ಷಯರೋಗ ಚಿಕಿತ್ಸೆ ಸಂಪೂರ್ಣಗೊಳಿಸಿ ಕ್ಷಯಮುಕ್ತರಾದ ಪ್ರಕರಣಗಳೊಂದಿಗೆ ಟಿಬಿ ಚಾಂಪಿಯನ್ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.ಕ್ಷಯರೋಗದ ಬಗ್ಗೆ ಇನ್ನೂ ಸಾಮಾಜಿಕ ಕಳಂಕವಿದೆ. ಕೆಲವರಂತು ಕ್ಷಯರೋಗ ತಪಾಸಣೆ ಮಾಡಿಸಲು, ಚಿಕಿತ್ಸೆ ಪಡೆಯಲು ಹಿಂಜರಿಕೆ, ಯಾರಾದರೂ ನೋಡಿದರೆ ಕ್ಷಯರೋಗವಿದೆ ಎಂದು ಗೊತ್ತಾದರೆ ನಮ್ಮ ಸಾಮಾಜಿಕ ಸ್ಥಾನಮಾನ ಕಡಿಮೆಯಾಗುತ್ತದೆ ಎಂದು ಗೌಪ್ಯತೆ ಕಾಪಾಡುತ್ತಾರೆ. ಕ್ಷಯರೋಗ ಯಾವುದೇ ಶಾಪ ಪಾಪದಿಂದ ಬರುವ ರೋಗವಲ್ಲ. ಇದು ಸೂಕ್ಷಾö್ಮಣು ಜೀವಿಯಿಂದ ಬರುವ ರೋಗವಾಗಿದ್ದು, ನಿರ್ದಿಷ್ಟ ಅವಧಿಗೆ ಔಷಧಗಳನ್ನು ಚಾಚೂ ತಪ್ಪದೇ ಸೇವಿಸಿದಾಗ 6 ರಿಂದ 8 ತಿಂಗಳವರೆಗೆ ಸಂಪೂರ್ಣ ವಾಸಿಯಾಗುವ ಕಾಯಿಲೆ ಎಂದು ಹೇಳಿದರು.ಔಷಧ ಅವಧಿ ಸಂಪೂರ್ಣ ಮುಗಿಸಿ ಗುಣಮುಖರಾದ ತಾವುಗಳು ನಿಮ್ಮ ನಿಮ್ಮ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಸಮಾಜವನ್ನು ಕ್ಷಯ ಮುಕ್ತ ಮಾಡಲು ನಿಮಗೆ ಟಿಬಿ ಚಾಂಪಿಯನ್ ತರಬೇತಿ ನೀಡುತ್ತಿದ್ದೇವೆ. ನಿಮ್ಮ ಯಶೋಗಾಥೆಯನ್ನು ಸಮುದಾಯಕ್ಕೆ ನಿಮ್ಮಿಂದಲೇ ತಿಳಿಸಿದಾಗ ಕ್ಷಯರೋಗದ ಬಗ್ಗೆ ಇರುವ ಸಾಮಾಜಿಕ ಕಳಂಕ ದೂರವಾಗಿರುತ್ತದೆ ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಕ್ಷಯರೋಗಿ ಎಂದು ಹೆಣ್ಣು ಕೊಡುತ್ತಾರೋ ಇಲ್ಲವೋ, ನಮ್ಮ ಮನೆಗಳಿಗೆ ಬಂದುಗಳು ನೆಂಟರು ಬರುತ್ತಾರೋ ಇಲ್ಲವೋ ಎನ್ನುವ ಭಯ ಆತಂಕ ಎಲ್ಲರನ್ನೂ ಕಾಡುವುದು ಸಹಜ. ಕ್ಷಯರೋಗಕ್ಕೆ ನಿರ್ದಿಷ್ಟವಾದ ಬಹುಔಷಧ ಚಿಕಿತ್ಸೆ ಸರ್ಕಾರದಿಂದ ಲಭ್ಯವಿದೆ. ನಿಮ್ಮ ಪೌಷ್ಟಿಕ ಆಹಾರ ಅಗತ್ಯತೆಗಾಗಿ ಚಿಕಿತ್ಸೆ ಪೂರ್ಣವಾಗುವವರೆಗೆ ಮಾಸಿಕ ರೂ.500/- ಪ್ರೋತ್ಸಾಹ ಧನ ಸಹಾಯ ಡಿ.ಬಿ.ಟಿ ಮೂಲಕ ನಿಮ್ಮ ಖಾತೆಗೆ ನೇರವಾಗಿ ಜಮೆ ಮಾಡುತ್ತಾರೆ. ಸಾರ್ವಜನಿಕರು ಕ್ಷಯರೋಗ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಕೆ ಬಿಡಿ ಈ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವ ಅವಶ್ಯಕತೆ ಇದೆ. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ಪತ್ತೆ ಉಚಿತ ಚಿಕಿತ್ಸೆ, ನಿಗದಿತ ಅವಧಿಯ ಚಿಕಿತ್ಸೆಯಿಂದ ಕ್ಷಯರೋಗ ಗುಣಪಡಿಸಬಹುದು ಎಂದರು. ಕ್ಷಯರೋಗಕ್ಕೆ ಪ್ರತಿ ದಿನ ತೆಗೆದುಕೊಳ್ಳುವ ಔಷಧಿಗಳು ಸರ್ಕಾರದಿಂದ ಸಂಪೂರ್ಣ ಉಚಿತ. ಸಂಕೋಚ ಬಿಡಿ ಕ್ಷಯರೋಗ ಲಕ್ಷಣವಿರುವವರಿಗೆ ನಿಮ್ಮ ಅನುಭವ ಹಂಚಿಕೊಳ್ಳಿ. ಸಾಮಾಜಿಕ ಕಳಂಕ ದೂರವಾಗಿಸಿ ಎಂದರು.ಇದೇ ಸಂದರ್ಭದಲ್ಲಿ ಟಿಬಿ ಗುಣಮುಖರಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಚಿತ್ತದುರ್ಗ ತಾಲ್ಲೂಕು ಕ್ಷಯರೋಗ ವಿಭಾಗದ ಎಸ್‌ಟಿಎಸ್‌ಗಳಾದ ಮಹೇಂದ್ರ, ಲೋಕೇಶ್, ಎಸ್‌ಟಿಎಲ್‌ಎಸ್‌ಗಳಾದ ಮಾರುತಿ, ನಾಗರಾಜ್, ಕ್ಷಯರೋಗದಿಂದ ಗುಣಮುಖರಾದ ಟಿಬಿ ಚಾಂಪಿಯನ್ ಅವರು ಭಾಗವಹಿಸಿದ್ದರು.
=======