ಶ್ರೀಶೈಲಂನಲ್ಲಿ ಆ. 1ರಂದು ಗುರುವಂದನೆ: ವಸತಿ ಸಮುಚ್ಛಯ, ಬಯಲು ಗ್ರಂಥಾಲಯ ಉದ್ಘಾಟನೆ
ಕಲಬುರಗಿ: ಜು.26: ಆಂಧ್ರದ ನಂದ್ಯಾಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಶ್ರೀ ಜಗದ್ಗುರು ಸಾರಂಗಮಠದಲ್ಲಿ ಆಗಸ್ಟ್ 1ರಂದು ಗುರುವಾರ ಗುರುವಂದನೆ, ವಸತಿ ಸಮುಚ್ಛಯ ಹಾಗೂ ಬಯಲು ಗ್ರಂಥಾಲಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಾರಂಗಮಠದ ಪೀಠಾಧ್ಯಕ್ಷ ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತೃತ್ವವನ್ನು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಭಾಲ್ಕಿಯ ಗುರುಬಸವ ಪಟ್ಟದ್ದೇವರು ವಹಿಸುವರು. ಚಿಂಚನಸೂರಿನ ಸಿದ್ದಮಲ್ಲ ಶಿವಾಚಾರ್ಯರು, ಸೊನ್ನದ ಶಿವಾನಂದ್ ಮಹಾಸ್ವಾಮಿಗಳು, ನೆಲೋಗಿಯ ಸಿದ್ಧಲಿಂಗ ಮಹಾಸ್ವಾಮಿಗಳು, ಕಲಬುರ್ಗಿಯ ಶಿವಾನಂದ್ ಮಹಾಸ್ವಾಮಿಗಳು, ಜೇರಟಗಿಯ ಮಹಾಂತ ಮಹಾಸ್ವಾಮಿಗಳು, ಚಿತ್ತಾಪುರದ ಸೋಮಶೇಖರ್ ಶಿವಾಚಾರ್ಯರು, ಲಾಡಮುಗಳಿಯ ಅಭಿನವ ಬಸವಲಿಂಗ ಮಹಾಸ್ವಾಮಿಗಳು, ಮಡಕಿಯ ಸಿದ್ದಲಿಂಗ್ ಶಿವಾಚಾರ್ಯರು ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ವಹಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅರುಣಕುಮಾರ್ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ, ಉದ್ಯಮಿ ಎಸ್.ವೈ. ಪಾಟೀಲ್, ಶರಣಬಸಪ್ಪ ಬೆಣ್ಣೂರ್, ಸುರೇಶ್ ಶಮಾ, ಎಚ್.ಕೆ. ಇಂಗಳೇಶ್ವರ್, ಮಲ್ಲಿಕಾರ್ಜುನ್ ಖೇಮಜಿ, ಸುಭಾಷ್ ಕೋರೆ, ರಾಘವೇಂದ್ರ ಅಶೋಕಕರಾವ್ ಕಲ್ಯಾಣಕರ್, ಗೌಸ್ ಬಾಬು, ಕಲ್ಯಾಣಿ ಶೀಲವಂತ್ ಅವರು ಆಗಮಿಸುವರು ಎಂದು ಅವರು ತಿಳಿಸಿದರು.
ಮಧ್ಯಾಹ್ನ 12 ಗಂಟೆಗೆ ಶ್ರೀ ದೇವಿಂದ್ರಪ್ಪಗೌಡ ಗೌಡಗೇರ್ ವಸತಿ ಸಮುಚ್ಛಯವನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪ ದರ್ಶನಾಪೂರ್ ಹಾಗೂ ಬಯಲು ಗ್ರಂಥಾಲಯವನ್ನು ಮಾಜಿ ಶಾಸಕ ದತ್ತಾತ್ರೇಯ್ ಸಿ. ಪಾಟೀಲ್ ಅವರು ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ನಿಡುಮಾಮಿಡಿಯ ಜಗದ್ಗುರು ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಅತಿಥಿಗಳಾಗಿ ಗುತ್ತಿಗೆದಾರ ಶಿವಕಾಂತ್ ಮಹಾಜನ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಬಯಲು ಗ್ರಂಥಾಲಯ ಸಂಸ್ಥಾಪಕ ಸುಭಾಷ್ ಬಣಗಾರ್, ಉದ್ಯಮಿ ಸೋನು ಪಟೇಲ್, ಶರದ್ ರೇಷ್ಮಿ ಅವರು ಆಗಮಿಸುವರು. ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ದೇವಿಂದ್ರಪ್ಪಗೌಡ ಗೌಡಗೇರ್ ಅವರಿಗೆ ವಿಶೇಷ ಗೌರವ ನೆರವೇರಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸುಭಾಷ್ ಬಣಗಾರ್, ರಾಜು ಲೆಂಗಟಿ ಮುಂತಾದವರು ಉಪಸ್ಥಿತರಿದ್ದರು.