ಗುರು ಪರಂಪರೆಯನ್ನು ರೂಪಿಸಿದ ಕೀರ್ತಿ ವೇದವ್ಯಾಸರಿಗೆ ಸಲ್ಲುತ್ತದೆ: ಡಾ. ರಾಜೀವಲೋಚನ್
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೬: ಗುರು ಪರಂಪರೆಗೆ ಒಂದು ನಿರ್ದಿಷ್ಟ ದಿಕ್ಕು ತೋರಿಸಿ, ಅದನ್ನು ಕಟ್ಟಿದ ಕೀರ್ತಿ ವೇದವ್ಯಾಸರಿಗೆ ಸಲ್ಲುತ್ತದೆ ಎಂದು ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಡಾ. ರಾಜೀವಲೋಚನ್ ನುಡಿದರು.ನಗರದ ಸಹನಾರವಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಸಂಸ್ಕಾರ ಭಾರತೀ ದಾವಣಗೆರೆ ಜಿಲ್ಲಾ ಸಮಿತಿಯು ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ‘ಗುರುವಂದನಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾರತದಲ್ಲಿ ದೊಡ್ಡ ಗುರುಪರಂಪರೆಯೇ ಇದೆ. ಆ ಗುರುಪರಂಪರೆ ಅಡಿಯಲ್ಲಿ ನಮ್ಮ ಋಷಿಮುನಿಗಳು ರಚಿಸಿದ ಜ್ಞಾನ ಭಂಡಾರವಾದ ವೇದಗಳು ‘ಸರ್ವೇ ಜನಾ ಸುಖಿನೋ ಭವಂತು’ ಎಂಬ ಉದಾತ್ತ ಮೌಲ್ಯಗಳನ್ನು ಸಾರುತ್ತದೆ. ವೇದಗಳನ್ನು ಕ್ರಿಸ್ತಪೂರ್ವದಿಂದ ಇಲ್ಲಿಯವರೆಗೆ ಬಾಯಿಂದ ಬಾಯಿಗೆ ಮುಟ್ಟಿಸಲಾಗಿದೆ. ಇಂತಹ ಅಮೂಲ್ಯ ಜ್ಞಾನವನ್ನು ನೀಡಿದ ವೇದವ್ಯಾಸರು ಸೇರಿದಂತೆ ಎಲ್ಲ ಗುರುಗಳನ್ನು ಸ್ಮರಿಸುವ ದಿನ ಗುರುಪೂರ್ಣಿಮೆಯಾಗಿದೆ ಎಂದು ತಿಳಿಸಿದರು.ಆಷಾಢ ಶುಕ್ಲ ಹುಣ್ಣಿಮೆಯಂದು ಗುರುಪೂರ್ಣಿಮಯನ್ನು ಆಚರಿಸಲಾಗುವುದು. ಉತ್ತರ ಭಾರತದಲ್ಲಿ ಈ ಹಬ್ಬವನ್ನು ಬಹು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಎಲ್ಲ ಕಲೆಗಳಿಗೂ ನಟರಾಜ್ ಗುರು. ಆತನ ಡಮರುವಿನಿಂದ ಹೊರಟ ಶಬ್ಧದಿಂದ ಕಲೆಗಳು ಹುಟ್ಟಿದೆ ಎಂಬ ಪ್ರತೀತಿಯಿದೆ. ಅಷ್ಟವಿಧ ಕಲೆಗಳನ್ನು ಪ್ರೋತ್ಸಾಹಿಸುವ ಸಂಸ್ಕಾರ ಭಾರತೀ ನಟರಾಜನನ್ನು ಗೌರವಿಸಿ, ಆರಾಧಿಸುತ್ತದೆ ಎಂದು ಹೇಳಿದರಲ್ಲದೆ, ಮಕ್ಕಳು ವಿದ್ಯೆ ಕಲಿಸಿದ ಗುರುಗಳಿಗೆ ವಿನೀತರಾಗಿರಬೇಕು ಎಂದು ಹಿತನುಡಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಸಹನಾ ರವಿ, ಅಂಧಕಾರವನ್ನು ತೊಡೆದು, ಜ್ಞಾನದ ಜ್ಯೋತಿ ಬೆಳಗುವವನೇ ಗುರು. ಹಿಂದೆ ಗುರು, ಮುಂದೆ ಗುರಿ ಇದ್ದರೆ ಸಾಧನೆಯ ಶಿಖರವೇರುವುದು ಸುಲಭ. ನಮ್ಮ ಸಂಸ್ಕಾರ ಭಾರತೀ ವತಿಯಿಂದ ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಗುರುಪೂರ್ಣಿಮೆ ಮಹತ್ವವನ್ನು ತಿಳಿಸಲಾಗುತ್ತಿದೆ ಎಂದರು.