ಕೇಂದ್ರ ರೈಲ್ವೆ ಸಚಿವರಿಂದ ಕಲಬುರಗಿಗೆ ಅನ್ಯಾಯ : ಒಕ್ಕೂಟ ಆಕ್ರೋಶ
ಕಲಬುರಗಿ,ಜು.26-ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಮುಂದಾಗದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಮಂಜುನಾಥ ನಾಲವಾರಕರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದ್ದರು. ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ರಾಜ್ಯ ಸರ್ಕಾರ ಭೂಮಿಯನ್ನು ನೀಡಿತ್ತು. ಆದರೆ ಕಲಬುರಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿಯವರು ಸಂಸತ್‌ನಲ್ಲಿ
ನೆನಗುದಿಗೆ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಬಗ್ಗೆ ರೈಲ್ವೆ ಸಚಿವರಿಗೆ ಪ್ರಶ್ನೆ ಕೇಳಿದಂತಹ ಸಂದರ್ಭದಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು, 2014-15 ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಅನುಮೋದನೆ ನೀಡಿರಲಿಲ್ಲ. ವಿಭಾಗೀಯ ಕಚೇರಿ ಸ್ಥಾಪನೆ ಕಾರ್ಯ ಸಾಧ್ಯತೆ ಪರಿಶೀಲಿಸಲು ಮೂವರು ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿತ್ತು. ಕಾರ್ಯಾಚರಣೆ, ಹಣಕಾಸು, ಆಡಳಿತಾತ್ಮಕ ಮತ್ತಿತರ ವಿಷಯಗಳ ಬಗ್ಗೆ ಈ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಿದ್ದು, ರೈಲ್ವೆ ವಿಭಾಗೀಯ ಕಚೇರಿ ಅಗತ್ಯವಿಲ್ಲವೆಂದು ವರದಿ ಸಲ್ಲಿಸಿದೆ. ಹಾಗಾಗಿ ಈ ಪ್ರಸ್ತಾವ ಕೈಬಿಡಲಾಗಿದೆ ಎಂದು ವಿವರ ನೀಡಿದ್ದಾರೆ. ಇವರ ವಿವರಕ್ಕೆ ಸಂಸದ ರಾಧಾಕೃಷ್ಣ ದೊಡ್ಡಮನಿಯವರು ವಿಭಾಗೀಯ ಕಚೇರಿ ಸ್ಥಾಪನೆಗೆ ಅಗತ್ಯ ಜಮೀನು ಇದೆ. ಹಲವು ಸಲ ಈ ಸಂಬAಧ ಮನವಿ ಸಲ್ಲಿಸಲಾಗಿದೆ. ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸಂಧಿಸಬೇಕೆAದು ಮನವಿ ಮಾಡಿದರು. ಆದರೆ, ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು ಚಿಕ್ಕಬಳ್ಳಾಪೂರ – ಗೌರಿ, ಬಿದನೂರ 44 ಕಿ.ಮೀ.ನಡುವೆ ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಲು ಅಂತಿಮ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದಿದ್ದಾರೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಅತೀ ದೊಡ್ಡ ಜಿಲ್ಲೆಯಾದ ಕಲಬುರಗಿ ವಿಭಾಗೀಯ ರೈಲ್ವೆ ಕಚೇರಿ ಪ್ರಾರಂಭಿಸುವುದು ತುಂಬಾ ಅಗತ್ಯವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ರಾಜ್ಯ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರು ಮಧ್ಯಪ್ರವೇಶಿಸಿ ಕಲಬುರಗಿ ವಿಭಾಗೀಯ ರೈಲ್ವೆ ಕಚೇರಿ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿಸಲು ಮುಂದಾಗಬೇಕು, ಅಲ್ಲದೆ ಕಲಬುರಗಿಯಿಂದ ಮುಂಬೈ, ಬೆಂಗಳೂರು, ಚೆನ್ನೈ, ಹೈದ್ರಾಬಾದ, ವಾರಣಾಸಿ ಈ ಪ್ರದೇಶಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಶೇಷ ರೈಲುಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ನಿಯೋಗ ಇದೇ 27 ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರನ್ನು ಭೇಟಿ ಮಾಡಿ ಯಥಾವತ್ತಾಗಿ ಕಲಬುರಗಿಯ ವಿಭಾಗೀಯ ರೈಲ್ವೆ ಕಚೇರಿ ಸ್ಥಾಪನೆಯಾಗಬೇಕು, ಈ ಭಾಗದ ಜನರ ಕನಸನ್ನು ನನಸು ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು, ಅಲ್ಲದೆ ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಅವರ ಪ್ರಯತ್ನಕ್ಕೆ ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಸದಾ ಬೆನ್ನೆಲುಬಾಗಿ ನಿಂತು ಹೋರಾಟಕ್ಕೆ ಕೈಜೋಡಿಸಲಿದೆ ಎಂದು ತಿಳಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಜಿಲ್ಲಾ ಅಧ್ಯಕ್ಷ ಸಚಿನ್ ಫರತಾಬಾದ, ಮಾಧ್ಯಮ ವಕ್ತಾರ ಆನಂದ ತೆಗನೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.