ನಂಜನಗೂಡು ಮಠದಲ್ಲಿ ಜಯತೀರ್ಥರ ಆರಾಧನೆ:ರಥೋತ್ಸವ, ವಿಶೇಷ ಪೂಜೆ
ವಿಜಯಪುರ,ಜು.26:ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಶ್ರೀ ಜಯತೀರ್ಥರ ಆರಾಧನೆಯನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ತನ್ನಿಮಿತ್ತ ಬೆಳಿಗ್ಗೆ ಗುರುಸಾರ್ವಭೌಮರ ಅಷ್ಟೋತ್ತರ, ಸುಧಾ ಪಾರಾಯಣ, ಬಳಿಕ ವೃಂದಾವನಕ್ಕೆ ಫಲ ಪಂಚಾ ಮೃತ, ಅಲಂಕಾರ, ಮಹಾಪೂಜೆ ಜರುಗಿದವು.
ಶ್ರೀ ಜಯತೀರ್ಥರ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ನಮಿಸಲಾಯಿತು. ಆನಂತರ ಶ್ರೀ ಮಠದ ಒಳಾವರಣದಲ್ಲಿ ಟೀಕಾರಾಯರ ರಚಿಸಿದ ಗ್ರಂಥಗಳನ್ನು ಹಾಗೂ ಭಾವಚಿತ್ರ ಪುಷ್ಪಗಳನ್ನಿಟ್ಟ ಅಲಂಕೃತ ರಥೋತ್ಸವ ಜರುಗಿತು. ರಥೋತ್ಸವ ಸಮಯದಲ್ಲಿ ದೇವರ ನಾಮಗಳ ಸುಮಧುರ ಕಂಠದ ಹಾಡುಗಳು ಭಕ್ತರ ಭಕ್ತಿಯ ಪರಾಕಾಷ್ಠೆ ಮಠದ ಆವರಣದಲ್ಲಿ ಮಾರ್ದನಿಗೊಂಡವು.
ಇದೇ ಸಂದರ್ಭದಲ್ಲಿ ಟೀಕಾರಾಯರು ಮಾಧ್ವಪರಂಪರೆಗೆ ನೀಡಿದ ಕೊಡುಗೆಯನ್ನು ಕುರಿತು ಯುವ ಪಂಡಿತ ಡಾ. ಕೃಷ್ಣಾ ಚಾರ್ಯ ಕಾಖಂಡಕಿ ಪ್ರವಚನ ನೀಡಿದರು.
ಬೆಳಿಗ್ಗೆಯಿಂದಲೇ ಅಸಂಖ್ಯ ಸಂಖ್ಯೆಯಲ್ಲಿ ಭಕ್ತರು ಶ್ರೀಮಠಕ್ಕೆ ಆಗಮಿಸಿ ವೃಂದಾವನದ ದರ್ಶನ ಪಡೆದು ಪುನೀತ ರಾದರು. ವೃಂದಾವನವನ್ನು ಮಠದ ಅರ್ಚಕ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯರು ವಿವಿಧ ಬಗೆಯ ಪುಷ್ಪಗ ಳಿಂದ ಸುಂದರವಾಗಿ ಅಲಂಕರಿಸಿದ್ದು ಗಮನ ಸೆಳೆಯಿತು.
ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ಆರ್ ಆರ್ ಕುಲಕರ್ಣಿ, ವಾಮನರಾವ ದೇಶಪಾಂಡೆ, ಕೆ ಜಿ ದೇಶಪಾಂಡೆ, ಗುರಾಚಾರ್ಯ ಗೋಠೆ, ದಾಮೋದರಾಚಾರ್ಯ, ಕೃಷ್ಣ ಬೀಡಕರ, ಬಂಡಾಚಾರ್ಯ ಜೋಶಿ( ಕೂಡಗಿ), ಪ್ರಕಾಶ ಬಿಜಾಪುರ, ವಿಜಯೀಂದ್ರ ಡಿ ಜೋಶಿ, ತೆಲಗಿ ಜೋಶಿ ಮುಂತಾದವರು ಉಪಸ್ಥಿತರಿದ್ದರು.