ಸಮಾಜವನ್ನು ಸರಿ ದಾರಿಗೆ ತರುವ ಜವಾಬ್ದಾರಿ ವಕೀಲರ ಮೇಲಿದೆ:ಬಸವರಾಜ ಜಾಬಶೆಟ್ಟಿ
ಬೀದರ, ಜು.26: ಸಮಾಜವನ್ನು ಸರಿ ದಾರಿಗೆ ತರುವ ಜವಾಬ್ದಾರಿ ವಕೀಲರ ಮೇಲಿದ್ದು ತಾವು ಭವಿಷ್ಯದಲ್ಲಿ ಒಳ್ಳೆಯ ವಕೀಲರಾಗಿ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂದು ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಹೇಳಿದರು.
ಅವರು ಗುರುವಾರ ಆರ್.ವ್ಹಿ. ಬಿಡಪ್ಪ ಕಾನೂನು ಮಹಾವಿದ್ಯಾಲಯ ಬೀದರನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆರ್.ವ್ಹಿ. ಬಿಡಪ್ಪ ಕಾನೂನು ಮಹಾವಿದ್ಯಾಲಯ ಬೀದರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ, ಜಿಲ್ಲಾ ವಕೀಲರ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಲಿಕೆಯ ಉದ್ದೇಶ ಇರಬೇಕು ತಾವು ಇಂಥಹ ವಕೀಲರು ಆಗಬೇಕೆಂದು ಕನಸು ಕಂಡೆ ವಕೀಲ ವೃತ್ತಿಗೆ ಬಂದಿರುತ್ತಿರಾ. ಸಮಾಜದ ಬಹಳಷ್ಟು ಸಮಸ್ಯೆಗಳಿದ್ದು. ಅವುಗಳಲ್ಲಿ ಯಾವುದು ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವುದು ತಾವು ವಕೀಲ ವೃತ್ತಿಗೆ ಇಳಿದಾಗಲೆ ತಿಳಿಯುತ್ತದೆ. ಒಬ್ಬ ಒಳ್ಳೆಯ ನುರಿತ ವಕೀಲನಾಗಬೇಕಾದರೆ ಹೆಚ್ಚಿನ ಶ್ರಮ ಪಟ್ಟು ಓದಬೇಕು ಅಂದಾಗಲೇ ತಮಗೆ ಹೆಚ್ಚಿನ ಜ್ಞಾನ ದೊರೆಯುತ್ತದೆ ಎಂದರು.
ಏಳು ದಿನಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ಆಯೋಜನೆ ಮಾಡಿದ್ದಕ್ಕೆ ತಮಗೆಲ್ಲರಿಗೂ ಅಭಿನಂದನೆಗಳು. ತಾವು ಹೆಚ್ಚಿನ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಹೋಗುವ ಮೂಲಕ ನಮ್ಮ ಕಾಲೇಜಿನ ಹೆಸರು ತರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ಡಾ. ಸುರೇಶ ಜಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಗಾಂಧಿಜಿಯವರ ಸರ್ವೋದಯ ಪರಿಕಲ್ಪನೆ ಅಡಿಯಲ್ಲಿ ಆರಂಭಿಸಲಾಗಿದ್ದು ಇದು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಸಮಾಜ ಸೇವೆ ಮಾಡುವದರ ಜೊತೆಗೆ ರಾಷ್ಟ್ರೀ ಪ್ರೇಮವನ್ನು ಬೆಳೆಸುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪರಿಸರ ಸಂರಕ್ಷಣೆ, ಶ್ರಮದಾನ, ಪ್ರಗತಿಪರ ಚಿಂತನೆಯAತಹ ಹಲವಾರು ವಿಚಾರ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಸ್ವತಃ ಕೆಲಸ ಮಾಡುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಹಕಾರಿ ಆಗಲಿದೆ. ಶಿಸ್ತು, ಸಮಯ ಪಾಲನೆ, ಸಹಭಾಳ್ವೆ, ಶ್ರಮದಾನ ಇತ್ಯಾದಿಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ವ್ಯಕಿತ್ವ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆರ್. ವ್ಹಿ. ಬಿಡಪ್ಪ ಕಾನೂನು ಮಹಾವಿದ್ಯಾಲಯ ಬೀದರ ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಲವಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸದುಪಯೋಗ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾಥ ನಾಗೂರೆ. ಆರ್.ವ್ಹಿ. ಬಿಡಪ್ಪ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಮುನಿಯಪ್ಪ. ಟಿ. ಉಪ ಪ್ರಾಚಾರ್ಯರಾದ ಡಾ. ಜಯಶ್ರೀ ಪಾಟೀಲ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ. ಗಣಪತಿ ತಿಪ್ಪಣ್ಣಾ, ಡಾ. ಜಯಸಂತೋಷಿಮಾ ಸೇರಿದಂತೆ ಇತರೆ ಉಪನ್ಯಾಸಕರು ಮತ್ತು ಆರ್.ವ್ಹಿ. ಬಿಡಪ್ಪ ಕಾಲೇಜಿನ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.