ರಾಜ್ಯದಲ್ಲಿನ ಹಗರಣ ತನಿಖೆಗೆ ಶ್ರೀರಾಮಸೇನೆ ಒತ್ತಾಯ
ಆಳಂದ:ಜು.26: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಹಗರಣ ನಡೆದಿದೆ ಎಂದು ಆರೋಪಿಸಿ ಶ್ರೀರಾಮ ಸೇನೆಯಿಂದ ರಾಜ್ಯವ್ಯಾಪಿ ಕರೆ ನೀಡಿದ ಪ್ರತಿಭಟನೆಗೆ ಬೆಂಬಲಿಸಿ ತಾಲೂಕು ಶ್ರೀರಾಮ ಸೇನೆಯಿಂದ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಕಾರ್ಯಕರ್ತರು ದೂರಿನ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತೌ ಮುಂಭಾಗದಲ್ಲಿ ಗುರುವಾರ ಶ್ರೀರಾಮ ಸೇನೆ ಕಾರ್ಯಕರ್ತರು ತಹಸೀಲ್ದಾರ ಪರ ಆಗಮಿಸಿದ್ದ ಗ್ರೇಡ್-2 ತಹಸೀಲ್ದಾರ ಬಿ.ಜಿ.ಕುದರಿ ಅವರ ಮೂಲಕ ರಾಜ್ಯಪಾಲರಿಗೆ ದೂರಿನ ಪ್ರತಿಯನ್ನು ಸಲ್ಲಿಸಿದರು.
ರಾಜ್ಯದ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆ ವಿಧಿಸಿ, ದುರುಪಯೋಗವಾಗಿರುವ ತೆರಿಗೆದಾರನ ಹಣವನ್ನು ಮತ್ತೆ ರಾಜ್ಯದ ಬೊಕ್ಕಸಕ್ಕೆ ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಅವ್ಯವಹಾರಗಳು, ಹಗರಣಗಳು ನಡೆದಿದ್ದು ಬೆಳಕಿಗೆ ಬಂದಿರುವುದು ಇವುಗಳಲ್ಲಿ ಪ್ರಮುಖವಾಗಿ ವಾಲ್ಮೀಕಿ ನಿಗಮದ ಹಗರಣ, ಬೋವಿ ಸಮಾಜಕ್ಕೆ ನೀಡಲಾಗಿದ್ದ ಅನುದಾನದ ಹಗರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಅಂಬೇಡ್ಕರ್ ನಿಗಮದ ಅನುದಾನದ ದುರ್ಬಳಕೆ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಹಗರಣದ ಬಗ್ಗೆ ಪ್ರತಿ ನಿತ್ಯವೂ ದಿನ ಪತ್ರಿಕೆಗಳಿಂದ ಮತ್ತು ವಿದ್ಯುನ್ಮಾನ ಸುದ್ದಿ ಮಾಧ್ಯಮಗಳ ಮೂಲಕ ಮಾಹಿತಿ ದೊರೆಯುತ್ತಿದೆ. ದೇವರಾಜ ಅರಸು ನಿಗಮದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಮನವಿ ಸಲ್ಲಿಸಿದರು.
ಅಲ್ಲದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮತ್ತು ಹಿಂದುಳಿದ ವರ್ಗಗಳ ನಿಗಮಗಳಲ್ಲಿ ಮೀಸಲಾಗಿಟ್ಟಿದ ಕೋಟ್ಯಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇವೆಲ್ಲಾ ಹಗರಣಗಳ ಬಗ್ಗೆ ಸೂಕ್ತವಾದ ತನಿಖೆಯನ್ನು ನಡೆಸಲು ರಾಜ್ಯಪಾಲರು ಆದೇಶ ನೀಡಬೇಕು, ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆ ವಿಧಿಸಲು ಕೋರಿ ಮತ್ತು ದುರುಪಯೋಗವಾಗಿರುವ ಸಾರ್ವಜನಿಕರ ತೆರಿಗೆ ಹಣವನ್ನು ಮತ್ತೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಮರುಪಾವತಿ ಮಾಡಿಸಲು ನಿರ್ದೇಶನ ನೀಡಬೇಕು ಎಂದು ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಈರಣ್ಣಾ ಬಿ. ಹತ್ತರಕಿ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚನ್ನಪ್ಪ ಹತ್ತರಕಿ, ಮಹಾದೇವ ಅಲಗೊಡೆ, ಪ್ರದೀಪ ಗಾಳೆ, ಸೀತಲ ಹೊಸಳಿ, ಶರಣು ಹತ್ತರಕಿ, ಅನಿಲ ಕಂದಗುಳೆ, ನಾಗು ಬಾರಮಣೆ, ಚೇತನ ಧೂಳೆ, ಆನಂದ ಮಡಿವಾಳ ಮತ್ತಿತರು ಇದ್ದರು.