ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿ.ಪಂ. ಸಿಇಒ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ
ವಿಜಯಪುರ,ಜು.26:ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಬುಧವಾರ ಕೊಲ್ಹಾರ ತಾಲೂಕಿನ ತೆಲಗಿ, ರೋಣಿಹಾಳ ಹಾಗೂ ಮುಳವಾಡ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ತೆಲಗಿಗೆ ಭೇಟಿ ನೀಡಿದ ಅವರು, ಕೂಸಿನ ಮನೆ ಕೇಂದ್ರಕ್ಕೆ ಮಕ್ಕಳ ನೋಂದಣಿ, ಮಕ್ಕಳ ಹಾಜರಾತಿ, ಪೌಷ್ಟಿಕ ಆಹಾರ, ಆಟದ ಸಾಮಗ್ರಿಗಳನ್ನು ವೀಕ್ಷಿಸಿ, ಮಕ್ಕಳ ನೋಂದಣಿ ಸಂಖ್ಯೆ ಹೆಚ್ಚಿಸಲು ಜನರಲ್ಲಿ ತಿಳುವಳಿಕೆ ಮೂಡಿಸಿ,ಮತ್ತು ಕೂಸಿನ ಮನೆ ಕೇಂದ್ರದ ಮಕ್ಕಳ ಆರೈಕೆದಾರರು ಮಕ್ಕಳನ್ನು ಕಾಳಜಿವಹಿಸಬೇಕು. ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು. ಸ್ವಚ್ಛತೆ ಕಾಪಾಡಿಕೊಂಡು ಜವಾಬ್ದಾರಿಯಿಂದ ನಿರ್ವಹಣೆ ಮಾಡಬೇಕು ಎಂದು ಗ್ರಾಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಮಕ್ಕಳ ಆರೈಕೆದಾರರಿಗೆ ಸೂಚಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾದ ಫಲಾನುಭವಿ ಮನೆಗೆ ಭೇಟಿ ನೀಡಿ ಫಲಾನುಭವಿಯೊಂದಿಗೆ ಚರ್ಚಿಸಿದರು. ತೆಲಗಿ ಗ್ರಾಮದಲ್ಲಿ ನಿರ್ಮಾಣಗೊಂಡ ಸರ್ಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿ ಕಲ್ಪಿಸಿರುವ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿ, ಸ್ವಾತಂತ್ರö್ಯ ದಿನಾಚರಣೆಯಂದು ಉದ್ಘಾಟಿಸಿ ಸಾರ್ವಜನಿಕ ಮುಕ್ತಗೊಳಿಸುವಂತೆಯೂ, ಶುದ್ಧ ಕುಡಿಯುವ ನೀರು, ಗಾಳಿ, ಬೆಳಕು, ವಿದ್ಯುತ್ ವ್ಯವಸ್ಥೆ, ವಾಚಕರಿಗೆ ಪುಸ್ತಕಗಳು, ಸ್ಪರ್ಧಾತ್ಮಕ, ಸ್ಪೋಕನ್ ಇಂಗ್ಲೀಷ ಪುಸ್ತಕ, ಸ್ಮಾರ್ಟ್ ಟಿ.ವ್ಹಿ, ಇ-ಮೊಬೈಲ್ ವ್ಯವಸ್ಥೆ ಕಲ್ಪಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೆಲಗಿ ಗ್ರಾಮದ 4ನೇ ವಾರ್ಡ್ನಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 5ಕ್ಕೆ ಭೇಟಿ ನೀಡಿ, ಈ ಕೇಂದ್ರದಲ್ಲಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡಬೇಕು. ಸ್ವಚ್ಛತೆ, ಮಕ್ಕಳಿಗೆ ಶಿಸ್ತು ಪಾಲನೆ ಹಾಗೂ ಕಲಿಕೆಗೆ ಆದ್ಯತೆ ನೀಡಬೇಕು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ ಸಮರ್ಪಕ ವಿತರಣೆ ಮಾಡಬೇಕು. ತಪ್ಪದೇ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಮೇಲ್ವಿಚಾರಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪಕಡ್ಡಿ ಗ್ರಾಮದ ಆರ್‌ಎಂಎಸ್‌ಎ ಪ್ರೌಢ ಶಾಲೆಗೆ ಭೇಟಿ ನೀಡಿ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ, ಅತ್ಯಂತ ಕಾಳಜಿಯಿಂದ ಕಾರ್ಯ ನಿರ್ವಹಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.
ಶಾಲೆಯಲ್ಲಿನ ಮೂರು ವರ್ಗ ಕೊಠಡಿಗಳಲ್ಲಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಕ್ಲಾಸ್ ಬೋರ್ಡಗಳನ್ನು ವೀಕ್ಷಣೆ ಮಾಡಿ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ. ಸಮಸ್ಯೆ ಆಲಿಸಿ ಕೆಲ ಹೊತ್ತು ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. 10ನೇ ತರಗತಿಯ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಬೇಕು, ವಿದ್ಯಾರ್ಥಿ ಜೀವನದಲ್ಲಿ ಓದು ಅತ್ಯವಶ್ಯಕ, ಜೊತೆಗೆ ಗುರಿಯೊಂದಿಗೆ ಮುನ್ನೆಡೆಯಬೇಕು. ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಆಟದ ಮೈದಾನ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಮುಳವಾಡ ಗ್ರಾಮದ ನಮ್ಮೂರ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಕೊಠಡಿಗಳನ್ನು ಪರಿಶೀಲಿಸಿದರು. ಈ ಸರ್ಕಾರಿ ಶಾಲೆಗೆ ನರೇಗಾ ಯೋಜನೆಯಡಿ ಆಟದ ಮೈದಾನ ಅಭಿವೃದ್ಧಿ, ಮಳೆ ನೀರು ಕೊಯ್ಲು ಘಟಕ, ಪೌಷ್ಟಿಕ ಕೈತೋಟ ಕಾಮಗಾರಿ ಅನುಷ್ಠಾನಗೊಳಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಂಚಾಳ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೊಲ್ಹಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿÀ ಸುನೀಲ ಮದ್ದಿನ, ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿದ ಅರುಣಕುಮಾರ ದಳವಾಯಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ನಿರ್ಮಲಾ ಸುರಪುರ, ಪಂಚಾಯತ್ ರಾಜ್ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರÀ ವಿಲಾಸ ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರÀ ವಿ. ಬಿ ಗೊಂಗಡಿ, ಶಾಖಾಧಿಕಾರಿ ಎನ್. ಬಿ. ನಾಯಕ, ತೆಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷÀ ಅರವಿಂದ ಕೊಪ್ಪದ, ತೆಲಗಿ ಗ್ರಾಮ ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ದಸ್ತಗೀರಸಾಬ ಬಿಳೇಕುದರೆ, ರೋಣಿಹಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಲಂಬು ಸೇರಿದಂತೆ ಇತರರು ಉಪಸ್ಥಿತರಿದ್ದರು.