ಬೇರೆ ಭಾಷೆಯೊಂದಿಗೂ ಕನ್ನಡ ಭಾಷೆ ಹೋಲಿಸಲಾಗದು
ವಿಜಯಪುರ, ಸೆ.೨೯- ಕನ್ನಡ ಭಾಷೆಗೆ ಸಾಕಷ್ಟು ವರ್ಷಗಳ ಹಿಂದಿನ ಇತಿಹಾಸವಿದ್ದು ಜಗತ್ತಿನ ಬೇರೆ ಯಾವುದೇ ಭಾಷೆಯೊಂದಿಗೆ ಕನ್ನಡವನ್ನು ಹೋಲಿಸಲಾಗದು. ಭಾಷೆಯ ಬಗೆಗೆ ಹೆಚ್ಚು ಅಭಿಮಾನ ಎಲ್ಲರಲ್ಲಿಯೂ ಮೂಡಬೇಕು.ಇತರೆ ಯಾವುದೇ ಭಾಷೆಯು, ಭಾಷಾ ಜನರು ಕನ್ನಡ, ಕನ್ನಡಿಗರ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳಬೇಕು ಎಂದು ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿ.ಕೆ.ಹರೀಶ್‌ಬಾಬು ತಿಳಿಸಿದರು.
ಪಟ್ಟಣದ ರೋಟರಿ ಶಾಲಾ ಸಭಾಂಗಣದಲ್ಲಿ ರೋಟರಿ ವಿಜಯಪುರ ವತಿಯಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಕನ್ನಡದ ಸ್ಥಿತಿಗತಿ ಕುರಿತು ಉಪನ್ಯಾಸ ನೀಡಿದರು.
ಮಕ್ಕಳ ದಿಸೆಯಿಂದಲೇ ಕನ್ನಡದ ಬಗೆಗೆ ಪ್ರೀತಿ, ಭಾಷಾ ಪ್ರೇಮ, ಆಸಕ್ತಿಯನ್ನು ಕೆರಳಿಸಬೇಕು. ಸರ್ಕಾರಿ ಕನ್ನಡದ ಶಾಲೆಗಳನ್ನು ಉಳಿಸುವಂತಾಗಬೇಕು. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಬೇಕು.
ವಿದ್ಯಾರ್ಥಿದಿಸೆಯಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಪರಕೀಯರನ್ನು ನಾವು ಅನುಸರಣೆ ಮಾಡುವುದಕ್ಕಿಂತ ನಮ್ಮಲ್ಲಿ ನಮ್ಮತನವಿದ್ದರೆ ಆಲೋಚನೆ, ಚಿಂತನೆ ಎಲ್ಲವೂ ಕನ್ನಡದಲ್ಲಿಯೇ ಇರಲು ಸಾದ್ಯವಿದೆ ಎಂದರು.
ಭಾಷೆಗೆ ಅಳಿವು ಉಂಟು: ಜಗತ್ತಿನ ಅನೇಕ ಭಾಷೆಗಳು ಈ ಶತಮಾನದ ಅಂತ್ಯದ ವೇಳೆಗೆ ಅಳಿವು ಕಾಣಬಹುದಾಗಿದೆ. ಭಾಷೆಯನ್ನು ಬಳಸದೇ ಇದ್ದರೆ ಕನ್ನಡವೂ ಅಳಿಯುವುದರಲ್ಲಿ ಸಂಶಯವಿಲ್ಲ. ಕನ್ನಡ ಭಾಷೆಗೆ ಅಂತಹ ಸ್ಥಿತಿ ಬಾರದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಭಾರತೀಯ ಮೂಲದ ಜ್ಞಾನಕ್ಕೆ ಜಗತ್ತಿನಲ್ಲಿ ಪ್ರಮುಖ ಸ್ಥಾನವಿದೆ. ಭಾರತೀಯ ಸಂಸ್ಕೃತಿ, ಋಷಿ, ವಿಜ್ಞಾನಿಗಳು, ತತ್ವಜ್ಞಾನಿಗಳು ನೀಡಿರುವ ಕೊಡುಗೆ ಅಪಾರವಾದುವು.ಭಗವದ್ಗೀತೆಯು ಬದುಕಿನ ಮಾರ್ಗಗಳನ್ನು ತೋರುವ ಮ್ಯಾನ್ಯುವಲ್ ಇದ್ದ ಹಾಗೆ ಎಂದರು.
ರೋಟರಿ ವಿಜಯಪುರ ಅಧ್ಯಕ್ಷ ಎಸ್.ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಗಳಲ್ಲಿನ ಭಾಷೆಯು ಕನ್ನಡವಾಗಬೇಕು. ರಾಷ್ಟ್ರ ಋಣ ತೀರಿಸಬೇಕಾದ ಹೊಣೆಗಾರಿಕೆಯು ಎಲ್ಲರ ಮೇಲಿರುತ್ತದೆ. ನಿಸ್ವಾರ್ಥದ ಮನೋಭಾವನೆಯಿಂದ ಮಾಡುವ ಸಮಾಜಸೇವೆಯು ಉನ್ನತ ಮಟ್ಟದ್ದು ಎಂದರು.
ರೋಟರಿ ಮಾಜಿ ಅಧ್ಯಕ್ಷ ಎಸ್.ಬಸವರಾಜು ಮಾತನಾಡಿ, ಭಾರತವು ಪೋಲಿಯೋ ಮುಕ್ತವಾಗಿದ್ದರೂ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ದಲ್ಲಿ ೧೭ ಮತ್ತು ಆಫ್‌ಘಾನಿಸ್ತಾನದಲ್ಲಿ ೧೯ ಪೋಲಿಯೋ ಕೇಸ್‌ಗಳು ಪತ್ತೆಯಾಗಿರುವುದರಿಂದ ಪೋಲಿಯೋಮುಕ್ತ ಜಗತ್ತಾನ್ನಾಗಿಸಲು ಅಂತರಾಷ್ಟ್ರೀಯ ರೋಟರಿ ಪಣ ತೊಟ್ಟಿದೆ. ಪೋಲಿಯೋ ವೈರಸ್ ಗಾಳಿಯಲ್ಲಿಯೂ ಹರಡಬಹುದಾದ್ದರಿಂದ ನೆರೆರಾಷ್ಟ್ರಗಳಿಂದ ನಮ್ಮದೇಶವನ್ನು ಪ್ರವೇಶಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬರುವ ಜನವರಿ ಮಾಹೆಯಲ್ಲಿ ಮತ್ತೊಮ್ಮೆ ಪೋಲಿಯೋ ಹನಿ ಹಾಕುವ ಅಭಿಯಾನ ನಡೆಯಲಿದ್ದು ಎಲ್ಲರೂ ೫ ವರ್ಷದೊಳಗಿನ ಮಕ್ಕಳಿಗೆ ಪ್ರತಿಶತ ನೂರರಷ್ಟು ಪೋಲಿಯೋ ಹನಿಯನ್ನು ತಪ್ಪದೇ ಹಾಕಿಸಬೇಕು ಎಂದರು.
ರೋಟರಿ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ, ಸುರೇಶ್, ರವಿ ಮಾತನಾಡಿದರು. ಚಿಕ್ಕಬಳ್ಳಾಪುರದ ಬ್ಯಾಂಕ್ ಉದ್ಯೋಗಿ ಆಶಾ, ಉಷಾ ಹರೀಶ್, ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಮೂರ್ತಿ, ರೋಟರಿ ಪದಾಧಿಕಾರಿಗಳು ಇದ್ದರು. ಗೀತಗಾಯನ ನಡೆಯಿತು.
