ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ನಿಶ್ಚಿತ
ರಾಮನಗರ, ಸೆ.೨೯- ಚನ್ನಪಟ್ಟಣ ಉಪ ಚುನಾವಣೆ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ಸೆಳೆಯಲು ಗಿಮಿಕ್ ಮಾಡುತ್ತಿದ್ದಾರೆ. ಅದಕ್ಕೂ ಮುಂಚೆ ಯಾಕೆ ಅವರು ಚನ್ನಪಟ್ಟಣ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ ಎಂದು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎ.ಮಂಜುನಾಥ್ ಅಭಿವೃದ್ಧಿ ಹೆಸರಿನಲ್ಲಿ ವಾಮಮಾರ್ಗದಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಗೆಲ್ಲಲು ಮುಂದಾಗಿರುವ ಡಿಕೆಶಿ ಯಶಸ್ಸು ಕಾಣುವುದಿಲ್ಲ ಎಂದರು.
೫೦೦ ಕೋಟಿ ಅನುದಾನ ತಂದಿದ್ದೇವೆ ಎಂದು ಮಂಕು ಬೂದಿ ಎರಚುತ್ತಿದ್ದಾರೆ. ಪಕ್ಷಕ್ಕೆ ಅಧಿಕಾರವಿದೆ ಎಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಆಮಿಷ ತೋರಿಸಿ, ಕಾಂಗ್ರೆಸ್ನತ್ತ ಸೆಳೆಯಲಾಗುತ್ತಿದೆ. ಅದಕ್ಕಾಗಿ, ಹಣದ ಹೊಳೆ ಹರಿಸುತ್ತಿದ್ದಾರೆ. ಅವರು ಏನೇ ಸರ್ಕಸ್ ಮಾಡಿದರೂ ಎನ್ಡಿಎ ಅಭ್ಯರ್ಥಿ ಗೆಲ್ಲುವುದು ಖಚಿತ. ಚುನಾವಣೆ ಘೋಷಣೆಯಾದರೆ ಕ್ಷೇತ್ರದ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ಸೆ.೨೯ರಂದು ಜಿಲ್ಲಾ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕನಕಪುರದಲ್ಲಿ ಹಮ್ಮಿಕೊಳ್ಳಲಾಗಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ಪಕ್ಷದ ಶಾಸಕರು ಹಾಗೂ ಮುಖಂಡರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರತಿ ಬೂತ್ನಲ್ಲಿ ಕನಿಷ್ಠ ೫೦ ಸದಸ್ಯತ್ವ ಮಾಡುವಂತೆ ಸ್ಥಳೀಯ ಪದಾಧಿಕಾರಿಗಳಿಗೆ ಗುರಿ ನೀಡಲಾಗಿದೆ ಎಂದು ಹೇಳಿದರು. ಗುರಿ ತಲುಪುವ ಸಲುವಾಗಿ ಬೂತ್ ಮಟ್ಟದ ಸಮಿತಿ ರಚಿಸಲಾಗಿದ್ದು, ಪಕ್ಷವು ಲೋಕಸಭಾ ಚುನಾವಣೆ ಬಳಿಕ ಕನಕಪುರದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅದಕ್ಕೆ ಮತ್ತಷ್ಟು ಪುಷ್ಟಿ ನೀಡಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವ ದೃಷ್ಟಿಯಿಂದ ಈಗಾಗಲೇ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದರಂತೆ, ರಾಮನಗರ ಕ್ಷೇತ್ರದಲ್ಲಿ ತೆರವಾಗಿದ್ದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಶಿವಲಿಂಗಯ್ಯ ಅವರನ್ನು ನೇಮಕ ಮಾಡಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಅವರು ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ವಿಶ್ವಾಸವಿದೆ ಎಂದು ತಾಲೂಕು ಅಧ್ಯಕ್ಷ ಆಯ್ಕೆ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ನಗರಸಭೆ ಸದಸ್ಯರಾದ ಮಂಜುನಾಥ್,ಗ್ಯಾಬ್ರಿಯಲ್, ರಮೇಶ್, ಮುಖಂಡರಾದ ನರಸಿಂಹ ಮೂರ್ತಿ, ಬಿಡಿಸಿಸಿ ಅಶ್ವಥ್, ಬಿ.ಉಮೇಶ್, ರವಿ, ರಾಮಕೃಷ್ಣ, ರಮೇಶ್, ಜಯಕುಮಾರ್, ಕೆಂಪರಾಜು, ಸೋಮಶೇಖರ್, ಸರಸ್ವತಿ, ಶೋಭಾ ಹಾಗೂ ಇತರರು ಇದ್ದರು.