ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ
ರಾಮನಗರ, ಸೆ. ೨೯- ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ಸಿಕ್ಕಿರುವುದರಿಂದ ಅವರು ಸಿ.ಎಂ ಹುದ್ದೆಗೆ ರಾಜೀನಾಮೆ ಕೊಟ್ಟು ಮಾಜಿ ಸಿಎಂ ಆಗಿ ತನಿಖೆ ಎದುರಿಸಬೇಕು ಎಂದು ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು.
ರಾಮನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ವರ್ಷದಲ್ಲೇ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ, ಪರಿಶಿಷ್ಟರಹಣ ದುರ್ಬಳಕೆ, ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸ್ವತಃ ಸಿದ್ದರಾಮಯ್ಯ ಅವರ ಕುಟುಂಬವೇ ಸಿಲುಕಿದೆ. ಎಲ್ಲಾ ಪ್ರಕರಣಗಳಲ್ಲೂ
ಸರ್ಕಾರವೇ ಅಪರಾಧಿ ಸ್ಥಾನದಲ್ಲಿ ನಿಂತಿದೆ ಆರೋಪಿಸಿದರು.
ತಮ್ಮ ಮೊದಲ ಅವಧಿಯ ಸರ್ಕಾರದ ಭ್ರಷ್ಟಾಚಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನೇ ರದ್ದುಪಡಿಸಿ, ಎಸಿಬಿ ರಚಿಸಿದ್ದರು. ಸರ್ಕಾರದ ಅಣತಿ ಮೇರೆಗೆ ಕೆಲಸ ಮಾಡುತ್ತಿದ್ದ ಎಸಿಬಿಯನ್ನು ಕೋರ್ಟ್ ರದ್ದುಪಡಿಸಿ ಲೋಕಾಯುಕ್ತಕ್ಕೆ ಮರುಜೀವ ಕೊಟ್ಟಿತು.
ಇದೀಗ, ಅದೇ ಲೋಕಾಯುಕ್ತದಿಂದ ಸಿದ್ದರಾಮಯ್ಯ ಅವರು ತನಿಖೆ ಎದುರಿಸುವ ಸ್ಥಿತಿ ಬಂದಿದೆ. ಒಟ್ಟಾರೆ ಅವರಿಗೆ ತಪ್ಪಿನ ಅರಿವಾಗಿದೆ. ಕಾನೂನು ಭೀತಿ ಎದುರಾಗಿದೆ. ಅವರೇ ಹಿಂದೆ ಹೇಳಿದಂತೆ ಈಗ ನಡೆದುಕೊಳ್ಳಬೇಕು ಎಂದಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ನಿಜಕ್ಕೂ ಅವರು ತಪ್ಪು ಮಾಡಿಲ್ಲವೆಂದರೆ ತನಿಖೆಗೆ ಹೆದರುವ ಅಗತ್ಯವೇನಿದೆ? ರಾಜ್ಯದಲ್ಲಿ ಸಿಬಿಐಗೆ ಅಂಕುಶ ಹಾಕುತ್ತಿರುವ ಸರ್ಕಾರದ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷ ಪುಷ್ಪಲತಾ, ಮುಖಂಡರಾದ ಗೌತಮ್ ಗೌಡ, ಶಿವಾನಂದ್, ಪದ್ಮನಾಭ, ನಾಗೇಶ್, ಚಂದ್ರಶೇಖರ್, ಸುರೇಶ್, ರುದ್ರದೇವರು, ಚೇತನ್, ರಾಘು ಇತರರು ಇದ್ದರು.