ಬಿಜೆಪಿ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.29:- ಕೊನೆಗೂ ಕಾನೂನನ್ನೇ ಅಡ್ಡ ದಾರಿಯನ್ನಾಗಿ ಮಾಡಿಕೊಂಡು ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಿ, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ನಾಯಕತ್ವವನ್ನು ದಮನ ಮಾಡಲು ಷಡ್ಯಂತ್ರ ರೂಪಿಸಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಖಂಡಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಶನಿವಾರ ಕಪ್ಪುಪಟ್ಟಿ ಧರಿಸಿ ಕರಾಳ ಮೌನ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಜಮಾವಣೆಗೊಂಡ ದಸಂಸ ಕಾರ್ಯಕರ್ತರು, ಹಿತೈಷಿಗಳು, ಶೋಷಿತ ಸಮುದಾಯಗಳ ಮುಖಂಡರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ತೋಳು ಮತ್ತು ಕುತ್ತಿಗೆ ಕಪ್ಪು ಪಟ್ಟಿಯನ್ನು ಧರಿಸಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ನ್ಯಾಯಾಂಗ ಮತ್ತು ಕಾರ್ಯಂಗವನ್ನು ಕೈಗೊಂಬೆಯಂತೆ ಆಡಿಸುತ್ತಾ ಯಾವುದೇ ಭ್ರಷ್ಟಚಾರ ನಡೆಸದ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ಆದೇಶಿಸಿ, ಎಫ್ ಐ ಆರ್ ದಾಖಲಿಸಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕರಾಳ ಮೌನ ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಕೇಂದ್ರದ ಸ್ವಾಯತ್ತ ಸಂಸ್ಥೆಗಳು ರಾಜಕೀಯ ದುರುದ್ದೇಶಗಳಿಗೆ ದುರ್ಬಳಕೆಯಾಗುತ್ತಿವೆ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಆಡಳಿತವನ್ನು ಹತ್ತಿರಗೊಳಿಸಬೇಕು. ಬಿಜೆಪಿ ವಿರುದ್ಧ ಪ್ರಬಲವಾಗಿ ಬೆಳೆಯುವ ನಾಯಕರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬೇಕು ಎಂಬುದು ಬಿಜೆಪಿಯ ಅಜಯಂದವಾಗಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡುವ ದೊಡ್ಡ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಗದ ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಸಾವಿರಾರು ಕೋಟಿ ಭ್ರಷ್ಟಾಚಾರದ ಹಣದ ಮೂಲಕ ಅಧಿಕಾರಕ್ಕೆ ಬಂದು, ಶೇ.40 ರಷ್ಟು ಕಮಿಷಣ ದಂಧೆ ನಡೆಸಿದರೂ ಯಾವುದೇ ತನಿಖೆಯಾಗಲಿ, ಹಗರಣದ ಪ್ರಕರಣವಾಗಲಿ ಆಗಲಿಲ್ಲ. ಬಿಜೆಪಿಯಲ್ಲಿರುವ ಹಲವು ನಾಯಕರು ಭ್ರಷ್ಟಾಚಾರಿಗಳಾಗಿದ್ದರೂ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವನ್ನೇ ಮಾಡಿಲ್ಲವೆಂದು ಆರೋಪಿಸಿದರು.
ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ ಮಾತನಾಡಿ, ಅಸಮಾನತೆ ಮತ್ತು ಅಸ್ಥಿರತೆಯನ್ನೇ ರಾಜಕಾರಣ ಮಾಡಿಕೊಂಡಿರುವ ಬಿಜೆಪಿಗೆ ಸಾಮಾಜಿಕ ಸಮಾನತೆಯಾಗಲಿ ಮತ್ತು ಪ್ರಬುದ್ಧ ಭಾರತದ ಬಾತೃತ್ವವಾಗಲಿ ಬೇಕಿಲ್ಲ. ಹಾಗಾಗಿ ಸಂವಿಧಾನಕ್ಕೆ ವಿಧೇಯರಾಗಿ, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕು. ಅಧಿಕಾರ ಮತ್ತು ಸಂಪತ್ತು ಹಂಚಿಕೆಯಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನ ಹಕ್ಕನ್ನ ನೀಡಬೇಕೆಂಬ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನಿಯಂತ್ರಿಸುವ ಮನುವಾದಿಗಳಿಗೆ ಸಮಸ್ಯೆಯಾಗಿರುವುದರಿಂದ ಮುಡಾ ನಿವೇಶನ ಹಂಚಿಕೆಯಲ್ಲಿ ಅಧಿಕಾರವನ್ನೇ ಬಳಸದಿರುವ ಮುಖ್ಯಮಂತ್ರಿಗಳನ್ನು ಆರೋಪಿಯನ್ನಾಗಿಸುವ ಕುತಂತ್ರವನ್ನು ಮಾಡಿದ್ದಾರೆ. ಇಂತಹ ವಾಮಮಾರ್ಗದ ರಾಜಕಾರಣ ಬಿಜೆಪಿಯ ನಾಯಕರಿಗೆ ಶೋಭೆ ತರುವುದಿಲ್ಲವೆಂದು ಕಿಡಿಕಾರಿದರು.
ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್ ಸೇರಿದಂತೆ ತಾ.ಪಂ ಮಾಜಿ ಸದಸ್ಯ ಎಂ.ರಮೇಶ್, ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಪುರಸಭೆ ಸದಸ್ಯ ತುಂಬಲ ಸಿ.ಪ್ರಕಾಶ್ ಹಾಗೂ ಮುಸ್ಲಿಂ ಮುಖಂಡ ಮಸ್ರೂರ್ ಅಹಮ್ಮದ್ ಮಾತನಾಡಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ಎನ್.ಸೋಮಣ್ಣ, ಮಾಜಿ ಸದಸ್ಯ ರಾಘವೇಂದ್ರ, ಗ್ರಾಪಂ ಅಧ್ಯಕ್ಷ ರಾಮನಂಜಯ್ಯ, ಸದಸ್ಯ ನಾಗರಾಜು, ಮಾಜಿ ಉಪ ಪ್ರಧಾನ ಡಿ.ಆರ್.ಮೂರ್ತಿ, ದಸಂಸ ಸಂಘಟನಾ ಸಂಚಾಲಕರಾದ ಕಿರಗಸೂರು ರಜನಿ, ಹಿರಿಯೂರು ಸೋಮಣ್ಣ, ಸಚಿವರ ಆಪ್ತ ಸಹಾಯಕ ಬಸವರಾಜು, ಮುಖಂಡರಾದ ಏಳುಮಲೈ ಮಂಜು, ಉಕ್ಕಲಗೆರೆ ರಾಜು, ಇಂಡವಾಳು ಹೊನ್ನಯ್ಯ, ಕೃಷ್ಣ ಮಾವಿನಹಳ್ಳಿ ಲಿಂಗರಾಜು, ಯಡದೊರೆ ನಾರಾಯಣ್, ರಂಗಸಮುದ್ರ ನಂಜುಂಡ, ಹುನಗನಹಳ್ಳಿ ಮಹದೇವ್, ಬಿಲಿಗೆರೆಹುಂಡಿ ಸಿದ್ದರಾಜು, ಬ.ಎಂ.ಶಿವಕುಮಾರ್, ಮಹೇಶ, ಆಲಗೂಡು ನಾಗರಾಜ್ ಮೂರ್ತಿ, ತಲಕಾಡು ಆನಂದ್, ಯಡದೊರೆ ನಾರಾಯಣ್, ಮುತ್ತತ್ತಿ ನಾಗರಾಜ್, ಯಾಚೇನಹಳ್ಳಿ ಶಿವರಾಂ, ಉಮೇಶ್, ಮಾದಿಗಳ್ಳಿ ರಾಮು, ಬನ್ನಹಳ್ಳಿ ರಾಜೇಂದ್ರ ಹಾಗೂ ಇನ್ನಿತರರು ಇದ್ದರು.