ಗ್ಯಾರಂಟಿಗಳಿಂದ ಸಮಾಜದಲ್ಲಿ ಧನಾತ್ಮಕ ಪರಿಣಾಮ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.29:- ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಧನಾತ್ಮಕ ಪರಿಣಾಮ ಬೀರಿದ್ದು, ಈ ಯೋಜನೆಗಳನ್ನು ಜಾರಿಗೊಳಿಸಿರುವುದು ನಮಗೆ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗ, ಇನ್ಸ್‍ಟಿಟ್ಯೂಟ್ ಫಾರ್ ಸೋಷಿಯಲ್ ವರ್ಕರ್ಸ್ ಫಾರ್ ಆಕ್ಷನ್ ರಿಸರ್ಚ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ ಸಂಪಾದಿತ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸರ್ಕಾರ ಜಾರಿಗೆ ತರುವ ಕೆಲವು ಯೋಜನೆಗಳಿಗೆ ಜಾತಿ-ಧರ್ಮ, ಆರ್ಥಿಕ ಮಾನದಂಡಗಳ ಇತಿಮಿತಿ ಇರುವುದಿಲ್ಲ. ಎಲ್ಲರೂ ಫಲಾನುಭವಿಗಳಾಗುತ್ತಾರೆ. ಇದರಿಂದ ಸಾಮಾಜಿಕವಾಗಿ ಅವರಿಗೆ ಅನುಕೂಲವಾಗುತ್ತದೆ. ನರೇಗಾ ಮತ್ತು ಅನ್ನಭಾಗ್ಯ ಯೋಜನೆಗಳು ಕೊರೊನಾ ಸಂದರ್ಭದಲ್ಲಿ ಬಡವರನ್ನು, ಕೆಳ ಮಧ್ಯಮ ವರ್ಗದವರನ್ನು ಬದುಕಿಸಿದವು.
ಆದ್ದರಿಂದ ಪಂಚ ಗ್ಯಾರಂಟಿಗಳ ಕುರಿತು ಫಲಾನುಭವಿಗಳು ಹೆಚ್ಚು-ಹೆಚ್ಚು ಮಾತನಾಡಬೇಕು. ತನ್ಮೂಲಕ ಯೋಜನೆಗಳಿಂದ ಪಡೆದುಕೊಂಡಿರುವ ಅನುಕೂಲ ತಿಳಿಸಬೇಕು ಎಂದರು.
ಸ್ವಾತಂತ್ರ್ಯ ಪಡೆದ ಬಳಿಕ ನಮಗೆ ರಾಜಕೀಯ ಪ್ರಜಾಪ್ರಭುತ್ವ ದೊರಕಿತು. ಆದರೆ, ಆರ್ಥಿಕ-ಸಾಮಾಜಿಕ ಪ್ರಜಾಪ್ರಭುತ್ವ ದೊರೆಯಲಿಲ್ಲ. ಅವಕಾಶ ವಂಚಿತರಿಗೆ ಆರ್ಥಿಕ-ಸಾಮಾಜಿಕ ಪ್ರಜಾಪ್ರಭುತ್ವ ದೊರಕಿದರೆ ಸಮಾಜದಲ್ಲಿ ಸಮಾನತೆ ಬರುತ್ತದೆ. ಎಲ್ಲಿವರೆಗೂ ಸಮಾನತೆ ಬರುವುದಿಲ್ಲವೋ ಅಲ್ಲಿವರೆಗೂ ರಾಜಕೀಯ ಪ್ರಜಾಪ್ರಭುತ್ವ ಪ್ರಯೋಜನವಾಗುವುದಿಲ್ಲ. ಹೀಗಾಗಿ ಆರ್ಥಿಕ-ಸಾಮಾಜಿಕ ಪ್ರಜಾಪ್ರಭುತ್ವಕ್ಕೆ ಚಾಲನೆ ಸಿಕ್ಕರೆ ಜಾತ್ಯಾತೀತ ವ್ಯವಸ್ಥೆ ಅನುಷ್ಠಾನಕ್ಕೆ ಬರುತ್ತದೆ. ಅಸಮಾನತೆ ನಿವಾರಣೆಯಾಗುತ್ತದೆ ಎಂದರು.
ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ಧ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಗಳಿಂದ ಸಮ ಸಮಾಜದ ಆಶಯ ಈಡೇರುವುದಿಲ್ಲ. ಈ ಕಾರಣಕ್ಕೆ ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಹಲವು ಭಾಗ್ಯಗಳನ್ನು ಜಾರಿ ಮಾಡಿದೆ. ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾದಾಗ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದೆ. ಇದಕ್ಕೆ 1949 ನ.25ರಂದು ಸಂವಿಧಾನ ಜಾರಿ ಸಭೆಯಲ್ಲಿ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಮಾಡಿದ ಭಾಷಣವೇ ನಮಗೆ ಸ್ಫೂರ್ತಿ ಎಂದರು.
ಜಾತಿ ಕಾರಣಕ್ಕಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆ ಸೃಷ್ಟಿ ಆಯಿತು. ಹೀಗಾಗಿ ಎಲ್ಲರಿಗೂ ಆರ್ಥಿಕ ಶಕ್ತಿ ಕೊಡುವ ಕಾರಣಕ್ಕೆ 2013-18ರವರೆಗೆ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದೆವು. ಹಾಗೆಯೇ ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಗ್ಯಾರಂಟಿಗಳ ಮೂಲಕ ಹಿಂದುಳಿದ ವರ್ಗಗಳಿಗೆ, ಬಡವರಿಗೆ ಆರ್ಥಿಕ ಶಕ್ತಿ ನೀಡಿದೆವು. ನಮ್ಮ ಭಾಗ್ಯಗಳನ್ನು, ಗ್ಯಾರಂಟಿಗಳನ್ನು ವಿರೋಧಿಗಳು ಆಡಿಕೊಂಡರು. ಈಗಲೂ ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾನು ಹೋದಲ್ಲಿ ಬಂದಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ಕಾಂಗ್ರೆಸ್ ಸರ್ಕಾರಕ್ಕೆ ಧನ್ಯತೆ ಅರ್ಪಿಸುತ್ತಿದ್ದಾರೆ ಎಂದರು.
ಅನ್ನಕಾಗಿ ಕಾಯುತ್ತಿದ್ದರು: ಹೊಟ್ಟೆ ತುಂಬ ಹಿಟ್ಟು-ಬಾಯಿ ತುಂಬ ಅನ್ನ ಎಂದು ನಮ್ಮ ತಾಯಿ ಹೇಳುತ್ತಿದ್ದರು. ನಮ್ಮ ಬಾಲ್ಯದ ಕಾಲದಲ್ಲಿ ಜನರು ಅನ್ನವನ್ನೇ ಕಂಡಿರಲಿಲ್ಲ. ಕೂಲಿ ಮಾಡಿ ಅದರಿಂದ ಬಂದ ಹಣದಲ್ಲಿ ರಾತ್ರಿ ದಿನಸಿ ತಂದು ಮುದ್ದೆ ಮಾಡಿಕೊಂಡು ಮನೆಯವರೆಲ್ಲ ಊಟ ಮಾಡಬೇಕಾಗಿತ್ತು. ಕೆಲವು ಸಲ ಜಮೀನುದಾರರ ಮನೆಯವರು ನೀಡಿದ ಮುದ್ದೆಯನ್ನು ಅಲ್ಲಿ ಊಟ ಮಾಡದೇ ಮನೆಗೆ ಬಂದು ಮನೆ-ಮಂದಿಯಲ್ಲ ಹಂಚಿಕೊಂಡು ತಿನ್ನಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಜ್ವರ-ಬೇಧಿಯಂತಹ ಅನಾರೋಗ್ಯ ಕಾಡಿದಾಗ ಆ ಜನರು ಮುಷ್ಠಿ ಅನ್ನಕ್ಕಾಗಿ ಉಳ್ಳವರ ಮನೆ ಬಾಗಿಲಿನಲ್ಲಿ ಕಾದು ನಿಲ್ಲುತ್ತಿದ್ದರು. ಇದನ್ನು ಕಣ್ಣಾರೆ ಕಂಡಿದ್ದ ಹಿನ್ನೆಲೆಯಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಗೆ ತರಲಾಯಿತು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇರ ನಡೆ ನುಡಿಯ ನಿಷ್ಠುರವಾದಿಯಾಗಿದ್ದು, ಅವರು ಅಪ್ಪಟ್ಟ ಚಿನ್ನ. ತಮ್ಮ ವೈಯಕ್ತಿಕ ಜೀವನದ ಕುರಿತು ಯಾವತ್ತೂ ಚಿಂತಿಸಿದವರಲ್ಲ. ಯಾವಾಗಲೂ ಜನಪರ ಕಾರ್ಯಗಳ ಬಗ್ಗೆ ಆಲೋಚನೆ ಮಾಡುತ್ತಾರೆ. ಇಂತಹ ಗುಣವುಳ್ಳ ಸಿಎಂ ಅನ್ನು ಕಂಡರೆ ಕೆಲವರಿಗೆ ಹೊಟ್ಟೆ ಉರಿ. ಮುಖ್ಯಮಂತ್ರಿ ಕುರ್ಚಿ ಖಾಲಿಯಾಗಲಿ, ನನಗೆ ಅದು ಸಿಗಲಿ ಎಂದು ಕೆಲವರು ಕಾದು ಕುಳಿತ್ತಿದ್ದಾರೆ. ಆದರೆ ಅವರ ಆಸೆ ಯಾವತ್ತೂ ಈಡೇರುವುದಿಲ್ಲ. ಈ ನೆಲದ ಕಾನೂನಿಗೆ ಹಾಗೂ ನಾಡಿನ ಜನರಿಗೆ ಸಿದ್ದರಾಮಯ್ಯ ಯಾರ ಪರವಿದ್ದಾರೆ ಎನ್ನುವುದು ಗೊತ್ತು. ಅವರು ಸಂವಿಧಾನದ ವಿಧೇಯ ವಿದ್ಯಾರ್ಥಿ. ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಾರೆ ಎಂದು ಗುಣಗಾನ ಮಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೆÇ್ರ.ಪುರುಷೋತ್ತಮ ಬಿಳಿಮಲೆ ಮಾತನಾಡಿ, 2017ರಿಂದ ಭಾರತದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಾ, ಕೊರೋನಾ ಕಾಲದಲ್ಲಿ ಇನ್ನಷ್ಟು ನೆಲಕಚ್ಚಿತು. ನಿರುದ್ಯೋಗ, ಬಡತನ ಇಮ್ಮಡಿಯಾಗಿ ಜಿಡಿಪಿ ಕುಸಿದಿತ್ತು. ಇಂಥಾ ಭಯಾನಕ ಆರ್ಥಿಕ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳು ರಾಜ್ಯ ಸ್ಮಶಾನ ಆಗದಂತೆ ತಡೆದಿದೆ. ಕೊರೊನಾ ಕಾಲದ ಬಿಕ್ಕಟ್ಟುಗಳಿಗೆ ಗ್ಯಾರಂಟಿಗಳು ಪರಿಹಾರವಾಯಿತು. ಇದನ್ನು ನಾವೆಲ್ಲಾ ಧೈರ್ಯದಿಂದ ಹೇಳಬೇಕು. ದೇಶಕ್ಕೆ ಮಾದರಿಯಾದ ಈ ಯೋಜನೆಗಳು ಜನಕಲ್ಯಾಣಕ್ಕೆ ಹೇಗೆ ಸಹಕರಿಸಿತು ಎಂಬುದನ್ನು ಹೇಳಬೇಕು ಎಂದರು.
ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ಕೃತಿಯ ಸಂಪಾದಕ ಡಾ.ಡಿ.ಶ್ರೀನಿವಾಸ ಮಣಗಳ್ಳಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.