ನಿರಂತರ ಮಳೆ: ಮುಂಜಾಗ್ರತೆಗೆ ಸೂಚನೆ
ಹುಬ್ಬಳ್ಳಿ,ಜು.೨೬: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಾಗೂ ತಮ್ಮ ಸುರಕ್ಷತೆಯ ಬಗ್ಗೆ ಚಾಲಕರು ಹಾಗೂ ನಿರ್ವಾಹಕರುಗಳು ಎಲ್ಲಾ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಸಾರಿಗೆ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಬಹಳಷ್ಟು ರಸ್ತೆಗಳು ಹದಗೆಟ್ಟಿರುತ್ತವೆ. ಪ್ರವಾಹದಿಂದಾಗಿ ಹಲವಾರು ಕಡೆಗಳಲ್ಲಿ ಸೇತುವೆಗಳು, ರಸ್ತೆಗಳು ಜಲಾವೃತವಾಗಿವೆ. ಹೊಸದಾಗಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಕೆಲವು ಕಡೆ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಅಂತಹ ಸ್ಥಳಗಳಲ್ಲಿ ತಗ್ಗು,ಗುಂಡಿಗಳ ಆಳದ ಅಂದಾಜು ಸಿಗುವುದಿಲ್ಲ. ಹೀಗಾಗಿ ತಮ್ಮ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಚಾಲಕರು ಹಾಗೂ ನಿರ್ವಾಹಕರು ಎಲ್ಲಾ ಅವಶ್ಯಕ ಮುಂಜಾಗ್ರತೆ ವಹಿಸಬೇಕು. ಎಚ್ಚರಿಕೆಯಿಂದ ಬಸ್ ಚಾಲನೆ ಮಾಡಬೇಕು.ನಿರ್ವಾಹಕರು ಸಕಾಲಿಕ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕು. ಮಳೆ-ಮಂಜಿನಿಂದಾಗಿ ಎದುರಿನ ದೃಶ್ಯ, ರಸ್ತೆ ಸ್ಪಷ್ಟವಾಗಿ ಗೋಚರಿಸದಿದ್ದಾಗ ಮುಂದೆ ಹೋಗುತ್ತಿರುವ ವಾಹನಗಳನ್ನು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಲು ಪ್ರಯತ್ನಿಸಬಾರದು. ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಬಸ್ ಚಾಲನೆ ಮಾಡುವ ದುಸ್ಸಾಹಸಕ್ಕೆ ಮುಂದಾಗಬಾರದು ಎಂದು ಅವರು ತಿಳಿಸಿದ್ದಾರೆ..