ರೈತರ ಕ್ಷೇತ್ರದಲ್ಲಿಯೇ ತಾಂತ್ರಿಕ ಪರಿಹಾರ
ಬಾಗಲಕೋಟೆ,ಜು೨೬ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ಸಭಾಗಿತ್ವದಲ್ಲಿ ಪರಿಣಿತ ವಿಜ್ಞಾನಿಗಳ ತಂಡಗಳನ್ನು ರಚಿಸಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಬಾಗಲಕೋಟೆ ಹಾಗೂ ವಿಜಯಪುರ ಸಹಯೋಗದಲ್ಲಿ ಹಮ್ಮಿಕೊಂಡ ಮೊದಲನೇ ಹಂತದ ತ್ರೆöÊಮಾಸಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ತೋಟಗಾರಿಕೆ ವಿವಿಯು ಕಳೆದ ದಶಕದಿಂದ ತೋಟಗಾರಿಕಾ ಬೆಳೆಗಳಾದ ತರಕಾರಿ, ಹಣ್ಣು, ಹೂಗಳು, ತೋಟಪಟ್ಟಿ ಹಾಗೂ ಮಸಾಲ ಬೆಳೆಗಳಲ್ಲಿ ೪೦ಕ್ಕೂ ಹೆಚ್ಚು ಅಧಿಕ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ನೀಡಲಾಗಿದೆ. ಇನ್ನು ಮುಂದು ವಿಸ್ತರಣಾ ಚಟುವಟಿಕೆಗಳನ್ನು ರೈತರ ಕ್ಷೇತ್ರಗಳಲ್ಲಿಯೇ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ರಾಜ್ಯದಲ್ಲಿ ಇಂದು ತೋಟಗಾರಿಕಾ ಬೆಳೆಗಳತ್ತ ಆರ್ಥಿಕ ಭದ್ರತೆಗಾಗಿ ರೈತರು, ಯುವಕ, ಯುವತಿಯರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಸಂಶೋಧನಾ ಫಲ ರೈತರ ಅಭಿವೃದ್ಧಿಗಾಗಿಯೇ ಇರುವುದರಿಂದ ಇಂದು ವಿಶ್ವವಿದ್ಯಾಲಯದ ನಡೆ ರೈತರ ಹೊಲದ ಕಡೆದತ್ತ ಸಾಗಬೇಕಾಗಿದೆ. ಅನೇಕ ಹಣ್ಣಿನ ವಿವಿಧ ತಳಿಗಳ ಸಸ್ಯ ಅಭಿವೃದ್ಧಿ ಮಾಡಿ ತರಕಾರಿ ಬೀಜಗಳನ್ನು ಉತ್ಪಾದಿಸಿ ಪುಷ್ಪೋದ್ಯಮಗಳಿಂದ ಅನೇಕ ಅಲಂಕಾರಿಕ ಸಸಿಗಳನ್ನು ವೃದ್ಧಿಸಿ ರೈತರಿಗೆ ನೀಡಲಾಗಿದೆ. ಅವಳಿ ಜಿಲ್ಲೆಗಳಲ್ಲಿ ದಾಳಿಂಬೆ, ದ್ರಾಕಿ,್ಷ ನಿಂಬೆ, ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ರೈತರ ವಾಣಿಜ್ಯ ಬೆಳೆಗಳಾಗಿದ್ದು, ಈ ಬೆಳೆಗಳಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತರುವ ಜೈವಿಕ ಪೀಡೆನಾಶಕಗಳು ಹಾಗೂ ಜೈವಿಕ ರಸಗೊಬ್ಬರಗಳ ಬಳಕೆ ವ್ಯಾಪಕವಾಗಿ ಬಳಸುವಂತೆ ರೈತರ ಕ್ಷೇತ್ರದಲ್ಲಿ ಪ್ರಾತ್ಯಕ್ಷಿಕೆ ಕೈಗೊಳ್ಳಲು ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟೆ ಮಾತನಾಡಿ ಕಳೆದ ವರ್ಷ ೫೬ ಸಾವಿರ ಹೆಕ್ಟರ್ ಪ್ರದೇಶ ತೋಟಗಾರಿಕಾ ಕ್ಷೇತ್ರವಿದ್ದಿದ್ದು, ಈ ವರ್ಷ ೭೫ ಸಾವಿರ ಹೆಕ್ಟರ್ ಪ್ರದೇಶಕ್ಕಿಂತ ಹೆಚ್ಚು ತೋಟಗಾರಿಕಾ ಬೆಳೆಗಳ ವ್ಯಾಪ್ತಿಯಾಗುವ ಸಂಭವವಿದೆ. ಜಿಲ್ಲೆಯ ಕಬ್ಬು ಬೆಳೆಯ ಪರ್ಯಾಯ ಬೆಳೆಗಳಾಗಿ ರೈತರು ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದರಿಂದ ಅವಳಿ ಜಿಲ್ಲೆಗಳ ಧನಾತ್ಮಕ ಬೆಳವಣಿಗೆಯಾಗಿದೆ ಎಂದರು.
ಅರಿಶಿಣ, ಪಪ್ಪಾಯಿ ಬೆಳೆಗಳಲ್ಲಿ ಕಂಡು ಬರುವ ವಿವಿಧ ರೋಗಗಳಿಗೆ ಸೂಕ್ತವಾದ ತಾಂತ್ರಿಕೆ ಹಾಗೂ ಔಷಧ ಉಪಚಾರವನ್ನು ಸಸ್ಯರೋಗ ಪ್ರಾಧ್ಯಾಪಕ ಡಾ. ಬಸವರಾಜಪ್ಪ ಎಂ.ಪಿ, ಹಣ್ಣು ಹೂವು ಕಾಯಿಪಲ್ಲೆಗಳಿಗೆ ಬರುವ ಕೀಟ ನಿಯಂತ್ರಣಗೊಳಿಸಲು ಸಾವಯವಯುಕ್ತ, ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕಗಳ ಬಳಕೆ ಕುರಿತು ಕೀಟಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ರಾಮನಗೌಡ ಹಡ್ಲಿಗೇರಿ, ತೆಂಗಿನ ಮಿಡಿಕಾಯಿ ಉದುರುವ ಸಮಸ್ಯೆಗೆ ತಾಂತ್ರಿಕತೆಗಳನ್ನು ಸಹ ಪ್ರಧ್ಯಾಪಕರಾದ ಡಾಕ್ಟರ್ ವಿಜಯಕುಮಾರ್ ನಾರಾಯಣಪುರ, ಹೂ ಬೆಳೆಗಳಾದ ಸೇವಂತಿಗೆ, ಚೆಂಡು ಹಾಗೂ ಗುಲಾಬಿ ಬೇಸಾಯ ಉತ್ಪಾದನಾ ತಾಂತ್ರಿಕತೆ ಹಾಗೂ ನೂತನ ತಳಿಗಳ ಪರಿಚಯವನ್ನು ಪುಷ್ಪೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಸತೀಶ್ ಪಾಟೀಲ ಮಾಡಿಕೊಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ತೋವಿವಿಯ ಪ್ರಾದ್ಯಾಪಕ ಡಾ.ವಸಂತ ಗಾಣಿಗೇರ ಅವರು ರೈತರು ತೋಟಗಾರಿಕಾ ಬೆಳೆಗಳಲ್ಲಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹರಿಸಲು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ತೋಟಗಾರಿಕಾ ಕೈಪಿಡಿಯನ್ನು ಪರಿಚಯಿಸುವುದರ ಜೊತೆಗೆ ಕ್ಷೇತ್ರದ ಅನುಭವಿರುವ ಅನೇಕ ವಿಜ್ಞಾನಿಗಳ ತಂಡವನ್ನು ಕಾರ್ಯಗಾರದಲ್ಲಿ ಪರಿಚಯಿಸಿ, ಅಧಿಕಾರಿಗಳಿಂದ ಸೂಕ್ತ ಸಲಹೆಗಳನ್ನು ಪಡೆಯಲು ವಿಶ್ವವಿದ್ಯಾಲಯ ಸನ್ನದ್ದವಾಗಿದೆ ಎಂದು ತಿಳಿಸಿದರು.
ಹಣ್ಣು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಆನಂದ ನಂಜಪ್ಪನವರು, ಬೀಜ ವಿಜ್ಞಾನದ ಸಹಪ್ರಾಧ್ಯಪಕರಾದ ಡಾ. ಪಲ್ಲವಿ ಎಂ, ವಿಸ್ತರಣಾ ನಿರ್ದೇಶಕ ಡಾಕ್ಟರ್ ಲಕ್ಷ್ಮೀನಾರಾಯಣ್ ಹೆಗಡೆ, ಡಾಕ್ಟರ್ ಎಂ.ಎಸ್.ಲೋಕೇಶ್, ಸಹ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕ ಡಾ.ಜಿ.ಭುವನೇಶ್ವರಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.