ಸಮಾಜ ಕಲ್ಯಾಣ ಸಚಿವರ ರಾಜೀನಾಮೆಗೆ ಒತ್ತಾಯ
ಕೋಲಾರ,ಜು,೨೬-ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮೋಸ ಮಾಡುತ್ತಿದ್ದು, ಇದನ್ನು ವಿರೋಧಿಸಿ ರಾಜ್ಯಾದ್ಯಾಂತ ಹೋರಾಟವನ್ನು ರೂಪಿಸಲು ಜು. ೨೫ ರಂದು ನಡೆಯುವ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಂಡು ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾಧ್ಯಕ್ಷ ವಕ್ಕಲೇರಿ ಶಂಕರಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಈ ಎಲ್ಲಾ ಕಾರಣಗಳಿಂದ ಕೂಡಲೇ ನೈತಿಕ ಹೊಣೆ ಹೊತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿರುವ ಡಾ.ಹೆಚ್.ಸಿ. ಮಹದೇವಪ್ಪ ಎಸ್.ಸಿ, ಎಸ್.ಟಿ ಸಮುದಾಯದ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಶೋಷಿತ ಸಮುದಾಯಗಳ ಆಶಯವನ್ನು ಈಡೇರಿಸುವ ಜೊತೆಗೆ, ಮೊದಲಿಗೆ ಶಿಕ್ಷಣಕ್ಕೆ ಪ್ರಾತಿನಿಧ್ಯವನ್ನು ನೀಡಬೇಕಾಗಿತ್ತು. ಶಿಕ್ಷಣದಿಂದ ತಮ್ಮ ಬದುಕನ್ನು ಅಸನು ಮಾಡಿಕೊಳ್ಳುವ ಮುಖಾಂತರ ಸಮಾಜದ ಮುಖ್ಯವಾಹಿನಿಗೆ ಬರಲು ಇದರಿಂದ ಸಾಧ್ಯವಾಗುತ್ತಿತ್ತು. ಈ ಕಾರಣಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದು, ಆದರೆ ದುರಂತ ಆಳುವ ವರ್ಗಗಳು. ಅದರಲ್ಲೂ ಇದೇ ಸಮುದಾಯದಿಂದ ಬಂದಂತಹ ಜನ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತು, ತಮ್ಮ ಸ್ವಹಿತಾಶಕ್ತಿಗಾಗಿ ತಮ್ಮನ್ನು ತಾವುಗಳು ತೊಡಗಿಸಿ ಕೊಂಡಿರುವುದು ಖಂಡನೀಯವಾದದ್ದು ಎಂದರು.
ಎಸ್.ಸಿ. ಎಸ್.ಟಿ. ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ಅಲ್ಪಪ್ರಮಾಣದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡುತ್ತಾ ಬಂದಿದ್ದು, ಇದನ್ನು ಇನ್ನು ಹೆಚ್ಚು ಮಾಡಬೇಕಾಗಿತ್ತು. ಇದನ್ನು ಹೊರತುಪಡಿಸಿ. ಇದಕ್ಕೆ ಯಾವುದೇ ಕಾರಣವನ್ನು ನೀಡದೇ ಪ್ರೋತ್ಸಾಹ ಧನವನ್ನು ನಿಲ್ಲಿಸಿರುವುದು ಖಂಡನೀಯ. ಇದಕ್ಕೆ ಹಾಕಿರುವ ಮನದಂಡ ಅವೈಜ್ಞಾನಿಕವಾದುದ್ದು ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಪಿ/ ಟಿಎಸ್‌ಪಿ ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದು ಅನ್ಯಾಯ ಹಾಗೂ ಮೋಸ, ಇವರಿಗೇ ಧೈರ್ಯವಿದ್ದರೇ ಎಸ್.ಸಿ/ ಎಸ್.ಟಿ. ಸಮುದಾಯದ ಹಣವನ್ನು ಹೊರತುಪಡಿಸಿ ಇತರೇ ಸಮುದಾಯಗಳ ಹಣವನ್ನು ತಾಕತ್ತಿದ್ದರೆ ಮುಟ್ಟಲಿ. ಕೂಡಲೇ ಎಸ್‌ಸಿಪಿ ಹಾಗೂ ಟಿ ಎಸ್ ಪಿ ಹಣವನ್ನು ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ಭೀಮವಾದ ಜಿಲ್ಲಾ ಶಾಖೆಯ ಪದಾಧಿಕಾರಿಗಳಾದ ಕೋಡಿಕಣ್ಣೂರು ನಾಗರಾಜ್, ಹರ್ಜೆನಹಳ್ಳಿ ಕೃಷ್ಣಪ್ಪ, ರವಿಚಂದ್ರನ್ ಇದ್ದರು.