ಸ್ಪರ್ಧಾತ್ಮಕ ಪೈಪೋಟಿ ಗೆಲ್ಲಲು ಇಂಗ್ಲೀಷನ್ನೂ ಕಲಿಯಿರಿ
ಕೋಲಾರ,ಜು,೨೬- ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ವಿಜ್ಞಾನ ಪಾಠ ಮಾಡಿದ ತಹಸೀಲ್ದಾರ್ ಹರ್ಷವರ್ಧನ್, ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಗೆಲವು ಸಾಧಿಸಲು ಕನ್ನಡದೊಂದಿಗೆ ಇಂಗ್ಲೀಷ್ ಚೆನ್ನಾಗಿ ಕಲಿಯಿರಿ ಎಂದು ಕಿವಿಮಾತು ಹೇಳಿದರು.
ಬುಧವಾರ ಬೆಳಗ್ಗೆ ಶಾಲೆಗೆ ಆಗಮಿಸಿದ ಅವರು, ಶಾಲೆಯ ಆವರಣ, ಸ್ವಚ್ಚತೆ, ಹಸಿರು ಪರಿಸರ, ಪ್ರತಿ ತರಗತಿಯಲ್ಲೂ ಸ್ಮಾರ್ಟ್‌ಕ್ಲಾಸ್ ಸೌಲಭ್ಯವನ್ನು ಕಂಡು ಸಂತಸ ವ್ಯಕ್ತಪಡಿಸಿ, ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠ ಮಾಡಿದರು.
ಶ್ರದ್ಧೆಯಿಂದ ಓದಿ, ವಿದ್ಯೆಯೊಂದಿಗೆ ಸಂಸ್ಕಾರವನ್ನೂ ಬೆಳೆಸಿಕೊಳ್ಳಿ ಎಂದ ಅವರು, ವಿಜ್ಞಾನದಲ್ಲಿ ಬರುವ ನ್ಯೂಟನ್ ನಿಯಮಗಳು, ಎಲೆಕ್ಟ್ರಿಕ್‌ಸಿಟಿ ಕುರಿತು ಮಕ್ಕಳಿಗೆ ಪ್ರಶ್ನೆ ಕೇಳಿ ಅವುಗಳ ಕುರಿತು ವಿವರಿಸಿದರು.
ಇಂದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಾತ್ರವಲ್ಲ ನೀವು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಾ ಇಂಗ್ಲೀಷ್ ಆಗತ್ಯವಿದೆ, ನಮ್ಮ ಕನ್ನಡ ಮಾತೃಭಾಷೆ ಅದನ್ನು ಚೆನ್ನಾಗಿ ಕಲಿತು ಭಾಷೆಗೆಗೌರವ ನೀಡಿ ಎಂದ ಅವರು, ಜತೆಯಲ್ಲೇ ಇಂಗ್ಲೀಷ್ ಕಲಿಯುವುದರಿಂದ ಉದ್ಯೋಗ ಸಿಗುವುದು ಸುಲಭವಾಗುತ್ತದೆ ಎಂದು ತಿಳಿಸಿದರು.
ಕನ್ನಡದೊಂದಿಗೆ ಇಂಗ್ಲೀಷ್ ಕಲಿತರೆ ನೀವು ಹೊರರಾಜ್ಯ, ಹೊರದೇಶಗಳಲ್ಲೂ ಉದ್ಯೋಗಾವಕಾಶ ಸಿಕ್ಕಾಗ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿ, ಸರ್ಕಾರಿ ಶಾಲೆಯಲ್ಲಿ ಇಷ್ಟೊಂದು ಉತ್ತಮ ಸೌಲಭ್ಯಗಳಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಶಾಲೆಯಲ್ಲಿ ರಾಗಿಮಾಲ್ಟ್ ಸವಿದ ಅವರು, ಸರ್ಕಾರ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ, ಸಮವಸ್ತ್ರ, ಶೂ ಎಲ್ಲವನ್ನೂ ನೀಡುತ್ತಿದೆ, ಆದರೆ ನೀವು ಮಾಡಬೇಕಾಗಿದ್ದು ಮಾತ್ರ ಪೋಷಕರಿಗೆ ಹೊರೆಯಾಗದೇ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಚೆನ್ನಾಗಿ ಓದಿ ಉತ್ತಮ ಸಾಧಕರಾಗಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಎಸ್ಸೆಸ್ಸೆಲ್ಸಿ ನಿಮ್ಮ ಜೀವನದ ಮಾರ್ಗವನ್ನು ತೋರುವ ಅತಿ ಪ್ರಮುಖ ಹಂತವಾಗಿದೆ, ನೀವು ಕೇವಲ ಐದಾರು ವರ್ಷ ಆಸಕ್ತಿಯಿಂದ, ಶ್ರಮವಹಿಸಿ ಓದಿದರೆ ನಿಮ್ಮ ಮುಂದಿನ ೫೦ ವರ್ಷಗಳ ಬದುಕು ಸಂತಸಮಯವಾಗಿರುತ್ತದೆ ಆದರೆ ನೀವು ಈಗ ದಾರಿ ತಪ್ಪಿದರೆ ನಿಮ್ಮ ಮುಂದಿನ ಇಡೀ ಜೀವನ ಕಷ್ಟದಲ್ಲೇ ಕಳೆಯಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಸುಗುಣಾ, ಶ್ವೇತಾ,ವೆಂಕಟರೆಡ್ಡಿ, ಫರೀದಾ, ಲೀಲಾ,ಶ್ರೀನಿವಾಸಲು, ಚಂದ್ರಶೇಖರ್ ಮತ್ತಿತರರಿದ್ದರು.