ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್: ಕರ್ನಾಟಕ ನೆಟ್‌ಬಾಲ್ ತಂಡಕ್ಕೆ ಚಾ.ನಗರದ ಮೂವರು ಆಯ್ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೨೬- ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಚಾಮರಾಜನಗರದ ನೆಟ್‌ಬಾಲ್ ಅಸೋಸಿಯೇಷನ್‌ನ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಅಸೋಸಿಯೇಷನ್‌ನ ಗೌರವಾಧ್ಯಕ್ಷೆ ನರ್ಗೀಸ್‌ಬಾನು ಅವರು ತಿಳಿಸಿದ್ದಾರೆ.
ಹರಿಯಾಣ ರಾಜ್ಯದಲ್ಲಿ ಜುಲೈ ೨೫ ರಿಂದ ೨೮ರವರೆಗೆ ೪೨ನೇ ಆವೃತ್ತಿಯ ಸೀನಿಯರ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್ ಪಂದ್ಯಾವಳಿ ನಡೆಯಲಿದ್ದು, ಈ ಪಂದ್ಯಾವಳಿಗೆ ಕರ್ನಾಟಕ ತಂಡದಿಂದ ನಮ್ಮ ಜಿಲ್ಲೆಯ ಅಸೋಸಿಯೇಷನ್‌ನ ಕ್ರೀಡಾಪಟುಗಳಾದ ಅಭಿ.ಎಸ್., ಅಭಿನಾಯಕ್ ಡಿ., ಚಂದು ಎಸ್. ಆಯ್ಕೆಯಾಗಿದ್ದು, ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಇತ್ತೀಚೆಗೆ ಮಧ್ಯ ಪ್ರದೇಶ, ಜಾರ್ಖಾಂಡ್, ಹಾಗೂ ಬೆಂಗಳೂರಿನಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಹಾಗೂ ಕಂಚಿನ ಪದಕ ತರುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದಾರೆ.
ಈ ಮೂವರು ಕ್ರೀಡಾಪಟುಗಳನ್ನು ಗೌರವಾಧ್ಯಕ್ಷೆ ನರ್ಗೀಸ್ ಬಾನು, ಜಿಲ್ಲಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಬಿ.ಮಹದೇವಪ್ರಸಾದ್ ಹಾಗೂ ಸಂಘದ ಎಲ್ಲಾ ಸದಸ್ಯರು ಅವರನ್ನು ಅಭಿನಂದಿಸಿದ್ದಾರೆ.