ಹನೂರಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ
ಸಂಜೆವಾಣಿ ವಾರ್ತೆ
ಹನೂರು ಜು ೨೬ :- ಪಟ್ಟಣದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿ ಆಚರಣೆ ಕಾರ್ಯಕ್ರಮವು ಕೆಂಪೇಗೌಡರ ಪುತ್ತಳಿ ರಥ ಮೆರವಣಿಗೆ ವಿವಿಧ ಕಲಾ ತಂಡಗಳು ವಾದ್ಯ ಮೇಳದೊಂದಿಗೆ ಮೆರವಣಿಗೆಯು ವಿಜೃಂಭಣೆಯಿಂದ ಸಂಭ್ರಮಾ ಸಡಗರದಿಂದ ಮೆರವಣಿಗೆ ಜರುಗಿತು.
ವೇದಿಕೆ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ರವರ ಪುತ್ತಳಿಗೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರು ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ಬೆಂಗಳೂರು ನಗರ ಕಟ್ಟಿದ ಕೆಂಪೇಗೌಡರ ಹೋರಾಟ ಕೊಡುಗೆ ಅಪಾರವಾಗಿದೆ.
ಕೆಂಪೇಗೌಡರು ಮಹನೀಯರು ಜಯಂತಿ ಆಚರಣೆ ಮಾಡುವ ನಾವು ಅವರ ಬದುಕು ಅವರ ಹೋರಾಟ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಬೇಕು. ಬುದ್ಧ, ಬಸವ ಅಂಬೇಡ್ಕರ್, ಕುವೆಂಪು ಎಲ್ಲಾ ನಾಯಕರುಗಳು ಕೂಡ ನಾಡಿಗೆ ಅತ್ಯಂತ ಮರೆಯಲಾಗದ ಕೊಡುಗೆಯನ್ನು ಕೊಟ್ಟಿದ್ದಾರೆ ನಮ್ಮ ಪೂರ್ವಿಕರು ಕೊಟ್ಟಿರುವಂತ ಹಬ್ಬ ಜಯಂತಿ ಆಚರಣೆ ಕಾರ್ಯಕ್ರಮಗಳು ಮುಂದುವರೆಯಬೇಕು ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡರ ರಥ ಮೆರವಣಿಗೆಯಲ್ಲಿ ಭಾಗಿಯಾದ ಶಾಸಕ ಎಂಆರ್ ಮಂಜುನಾಥ್ ಅವರು ರಥದಲ್ಲಿ ಇರಿಸಲಾಗಿದ್ದ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ನಂತರ ವಿವಿಧ ಕಲಾ ತಂಡಗಳ ಜೊತೆಗೂಡಿ ಜಿಟಿಜಿಟಿ ಮಳೆಯನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ಸಾಗಿದರು.
ಇದೇ ವೇಳೆ ಮಾತನಾಡಿದ ಶಾಸಕ ಮಂಜುನಾಥ್ ಅವರು ಬೆಂಗಳೂರು ಮಹಾನಗರ ಇಡಿ ವಿಶ್ವದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಯಬೇಕಾದರೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಅವರರು ದೂರದೃಷ್ಟಿಯಿಂದ ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ ಲಕ್ಷಾಂತರ ಎಕ್ಕರೆ ಪ್ರದೇಶಗಳಲ್ಲಿ ನೀರಿನ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಇದರಿಂದ ಅಂತರ್ಜಲ ಮಟ್ಟವು ಕೂಡ ವೃದ್ಧಿಯಾಗುತ್ತಿದೆ.
ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಸಂಭ್ರಮಾ ಸಡಗರದಿಂದ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಮಹಾನ್ ನಾಯಕರ ತತ್ವ ಸಿದ್ಧಾಂತ ಆದರ್ಶಗಳು ನಮ್ಮ ನಿಮ್ಮೆಲ್ಲರಿಗೂ ಮಾದರಿಯಾಗಲಿ ಎಂದು ತಿಳಿಸಿದರು.
ಹನೂರು ಪಟ್ಟಣದ ಮುಖ್ಯ ರಸ್ತೆ ಮೆರವಣಿಗೆಯಲ್ಲಿ ಕೆಂಪೇಗೌಡರ ಪ್ರತಿಮೆ ರಥ, ಡೊಳ್ಳು ಕುಣಿತ ವೀರಗಾಸೆ ಬೊಂಬೆ ಕುಣಿತ, ದೊಣ್ಣೆ ವರಸೆ. ಜೋಡಿ ಎತ್ತುಗಳು, ವಾದ್ಯ ಮೇಳದೊಂದಿಗೆ ಕುಣಿದು ಕುಪ್ಪಳಿಸಿ ಯುವಕರು ತಂಡ ಜಯಂತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಡಾ. ದತ್ತೇಶ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಗಂಗಾಧರ್, ನಿರ್ದೇಶಕ ಮಂಜೇಗೌಡ, ಜಿಲ್ಲಾಧ್ಯಕ್ಷ ನಾಗೇಂದ್ರ, ವಿಶ್ವಮಾನವ ಒಕ್ಕಲಿಗರ ಸಂಘದ ಅಧ್ಯಕ್ಷ ಲಿಂಗರಾಜುಗೌಡ, ಇ.ಒ ಉಮೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಗೌಡ, ನಟರಾಜ್ ಗೌಡ, ಪಟ್ಟಣ ಪಂ. ಸದಸ್ಯರುಗಳಾದ ಗಿರೀಶ್, ಹರೀಶ್, ಆನಂದ್ ಕುಮಾರ್, ಹನೂರು ಕೊಳ್ಳೇಗಾಲ ಒಕ್ಕಲಿಗರ ಸಂಘ ಸೇರಿದಂತೆ ಸಮಾಜದ ಮುಖಂಡರುಗಳು ಹಾಜರಿದ್ದರು.