ಸತತ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ಹೇಮಾವತಿ ನದಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.೨೬: ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು ನದಿ ದಡದ ಪ್ರದೇಶಗಳು ಹೇಮೆಯ ನೀರಿನಿಂದ ಆವೃತ್ತವಾಗಿವೆ.
ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿರುವುದರಿಂದ ಅಣೆಕಟ್ಟೆಯ ಕೆಳಭಾಗಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ನೀರಾವರಿ ಇಲಾಖೆಯ ಪ್ರಕಟಣೆಯಂತೆ ಗೊರೂರು ಜಲಾಶಯದಿಂದ ೪೫ ರಿಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು ಮಳೆ ಪ್ರಮಾಣ ಹೆಚ್ಚಾದರೆ ಹೊರ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಹೇಮೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ತೀವ್ರ ನಿಗಾ ಇರಿಸಿದ್ದು ಈಗಾಗಲೇ ನದಿ ತೀರದ ಪ್ರದೇಶಗಳ ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹೇಮಾವತಿ ನದಿ ದಂಡೆಯ ಆಸುಪಾಸಿನ ಗ್ರಾಮಸ್ಥರು ನದಿ ದಂಡೆಗೆ ತೆರಳದಂತೆ ಹಾಗೂ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಮುಂಜಾಗ್ರತೆ ಕ್ರಮ ಕೈಗೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನೀರಾವರಿ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೇಮಾವತಿ ತುಂಬಿ ಹರಿಯುತ್ತಿರುವುದರಿಂದ ತಾಲೂಕಿನ ಮಂದಗೆರೆ ಹಾಗೂ ಹೇಮಗಿರಿ ಬಳಿ ನಿರ್ಮಿಸಿರುವ ನದಿ ಒಡ್ಡು ಅಣೆಕಟ್ಟೆಗಳು ತಮ್ಮ ರುದ್ರ ರಮಣೀಯ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು ಜನರನ್ನು ತಮ್ಮತ್ತ ಸೆಳೆಯುತ್ತಿವೆ. ಹೇಮಗಿರಿ ಅಣೆಕಟ್ಟೆಯ ವೀಕ್ಷಣೆಗೆ ಕೆ.ಆರ್.ಪೇಟೆ ಪಟ್ಟಣ ಹಾಗೂ ನದಿ ದಂಡೆಯ ಅಕ್ಕಪಕ್ಕದ ಗ್ರಾಮಗಳ ಜನ ಬಂದು ಹೋಗುತ್ತಿದ್ದಾರೆ.