ವೀರಶೈವ ಲಿಂಗಾಯತ ನೌಕರರ ಸಂಘದ ರಜತ ಮಹೋತ್ಸವ, ಜು.೨೮ ರಂದು ಬೆಳ್ಳಿ ಬೆಡಗು ಸಂಭ್ರಮಾಚರಣೆಗೆ ಚಾಲನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. ೨೬- ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ೨೫ ನೇ ವರ್ಷಗಳು ಪೂರ್ಣಗೊಂಡ ರಜತ ಮಹೋತ್ಸವ ಆಚರಣೆಯ ಸಂಬಂಧ ಜು. ೨೮ ರ ಭಾನುವಾರದಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸಲು ಬೆಳ್ಳಿ ಬೆಡಗು ಸಂಭ್ರಮಾಚರಣೆಗೆ ಚಾಲನೆ ನೀಡಲಾಗುತ್ತದೆ ಎಂದು ಮೂರು ಸಂಘಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ದುಂಡುಮಾದಪ್ಪ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾ.ನಗರ ಜಿಲ್ಲೆಯಲ್ಲಿ ಸಂಘಟಿತ ಸಹಕಾರಿ ವಲಯದಲ್ಲಿ ಧಾಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಜನಪರ ಸೇವಾ ಕಾರ್ಯಗಳಲ್ಲಿ ಮನೆ ಮಾತಾಗಿರುವ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘವು ೧೯೯೯ರಲಿ ಸ್ಥಾಪನೆಗೊಂಡು ೨೫ ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಇದರ ಅಂಗವಾಗಿ ಜು. ೨೮ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಬೆಳ್ಳಿ ಬೆಡಗು ಸಂಭ್ರಮಾಚರಣೆಗೆ ಪೂಜ್ಯರು ಚಾಲನೆ ನೀಡಲಿದ್ದಾರೆ ಎಂದರು.
ಕಳೆದ ೨೫ ವರ್ಷಗಳಿಂದ ಸತತವಾಗಿ ಬಸವ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡು ಶರಣ ಚಿಂತನ ಸಿಂಚನ ಕಾರ್ಯಕ್ರಮದ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಸಹ ಬಸವಾದಿ ಶರಣ ಧರ್ಮ, ತತ್ವ ವಚನ ಸಾರಗಳನ್ನು ತಲುಪಿಸುವ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮ ನಿರಂತವಾಗಿ ನಡೆಯುತ್ತಿದೆ. ಇದರೊಟ್ಟಿಗೆ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ರಚನೆ, ನಾಗರೀಕರಿಗೆ ೫ ರೂ.ನಲ್ಲಿ ೨೦ ಲೀಟರ್ ಶುದ್ದ ಕುಡಿಯುವ ನೀರಿನ ಘಟನೆ ಸ್ಥಾಪನೆ, ಚಾ.ನಗರ ಪಟ್ಟಣ ಮತ್ತು ಸಂತೇಮರಹಳ್ಳಿಯಲ್ಲಿ ಇ- ಸ್ಟಾಂಪಿಂಗ್ ಸೇವೆ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಕೋವಿಡ್‌ನಲ್ಲಿ ಬಡ ಕಲಾವಿದರಿಗೆ ಆಹಾರ ಕಿಟ್ ವಿತರಣೆ, ಮಾಸ್ಕ್ ವಿತರಣೆ, ಪಿಪಿಎ ಕಿಟ್ ವಿತರಣೆ, ಸಾರ್ವಜನಿಕರಿಗೆ ಆರೋಗ್ಯದ ಕುರಿತು ಅರಿವು ಕಾರ್ಯಕ್ರಮವನ್ನು ಮಾಡಲಾಗಿದೆ ಎಂದರು.
ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಮಹಾಮನೆಯಲ್ಲಿ ಯೋಗ ತರಬೇತಿ, ಯೋಗಾಭ್ಯಾಸ, ತಾಲೂಕಿನ ೮೭ ಸರ್ಕಾರಿ ಶಾಲೆ ಮಕ್ಕಳಿಗೆ ಅನಿಕೇತನ ವೇದಿಕೆ ಸಹಯೋಗದಲ್ಲಿ ಆಲ್ ಇನ್ ಓನ್ ಪ್ರೊಜೆಕ್ಟರ್ ವಿತರಣೆ, ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಮತ್ತು ಪರೀಕ್ಷಾ ಸಿದ್ದತಾ ಬೋದನೆ, ಅರ್ಹ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಣ ಸಹಾಯ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂಗಮ ಗೃಹ ನಿರ್ಮಾಣ ಸಹಕಾರದಿಂದ ಮರಿಯಾಲದ ಬಳಿ ೨೦೦ ನಿವೇಶನಗಳ ಹಂಚಿಕೆ, ಸೇರಿದ ಶರಣ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಜೊತೆಗೆ ಮಕ್ಕಳಲ್ಲಿ ವೀರಶೈವ ಲಿಂಗಾಯತ ಧರ್ಮ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ಮಹಾಮನೆ ಮಾಡುತ್ತಾ ಬಂದಿದೆ ಎಂದು ಸಂಘದ ೨೫ ವರ್ಷಗಳ ಸುದೀರ್ಘ ಸೇವೆಯನ್ನು ದುಂಡುಮಾದಪ್ಪ ವಿವರಿಸಿದರು.
ಬೆಳ್ಳಿ ಬೆಡಗು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಿಯಾಲ ಮಠದ ಇಮ್ಮಡಿ ರಾಜೇಂದ್ರ ಸ್ವಾಮೀಜಿ ಹಾಗೂ ಚಾ.ನಗರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ವಹಿಸಲಿದ್ದಾರೆ. ಮೈಸೂರು ವಿವಿಯ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಕಾರ್ಯಕ್ರಮ ಉದ್ಘಾಟಿಸಲಿದ್ದು, ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಿದ್ಧಮಲ್ಲಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಗೌರಿಶಂಕರ್, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್. ಮುದ್ದು ಬಸವಣ್ಣ ಉಪಸ್ಥಿತಿ ವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜಂಟಿ ಕ್ರಿಯಾ ಸಮಿತಿಯ ಉಪಾಧ್ಯಕ್ಷ ನಾಗಭೂಷನ್, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಗೌರಿಶಂಕರ್ ಸಂಘದ ಉಪಾಧ್ಯಕ್ಷ ಎನ್.ಮಹದೇವಸ್ವಾಮಿ ಐಟಿಐ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಸುಂದರ್, ಸಹಕಾರ ಸಂಘದ ನಿರ್ದೇಶಕ ಕೆ.ಎಸ್.ಮಹದೇವಸ್ವಾಮಿ ಇದ್ದರು.