ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶನ
ಸಂಜೆವಾಣಿ ನ್ಯೂಸ್
ಮೈಸೂರು:ಜು.೨೬:- ರೈತರಿಗೆ ಭರವಸೆ ನೀಡಿ ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಕಬ್ಬು ಬೆಳೆಗಾರರ ಸಂಘ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಣಯಿಸಿದೆ.
ನಗರದ ಜಲದರ್ಶಿನಿಯಲ್ಲಿ ಸಂಘಟನೆಯ ವತಿಯಿಂದ ನಡೆದ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಕಪ್ಪು ಭಾವುಟ ಪ್ರದರ್ಶಿಸಿ ಜೈಲ್ ಬರೋ ಚಳವಳಿ ನಡೆಸಲು ನಿರ್ಣಯ ಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದಾಗ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ತೀರ್ಮಾನಿಸಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಂಘದ ಪದಾಧಿಕಾರಿಗಳ ಜತೆಗೆ ತಕ್ಷಣ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದಾಗ ಜು.೨೭ರಂದು ಸಭೆ ನಡೆಸಿ ತೀರ್ಮಾನಿಸಿದ್ದ ಜಿಲ್ಲಾಧಿಕಾರಿ ಇದೀಗ ಸಭೆಯ ಚಕಾರವೇ ಎತ್ತುತ್ತಿಲ್ಲ. ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾಡಳಿತ, ಸಚಿವರು, ಜನ ಪ್ರತಿನಿಧಿಗಳ ವಿರುದ್ಧ ಬಾವುಟ ಪ್ರದರ್ಶನ ಮಾಡಿ ಜೈಲ್ ಬರೋ ಚಳುವಳಿ ನಡೆಸಲಾಗುವುದು ಎಂದು ತಿಳಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶ ನಾಲೆಗಳಿಗೆ, ಕೆರೆ ಕಟ್ಟೆಗಳಿಗೆ ಕಳೆದ ವರ್ಷ ನೀರು ಕೊಡದೆ ರೈತರು ಬರ ಪೀಡಿತರಾಗಿದ್ದಾರೆ. ಹೀಗಾಗಿ ಪ್ರಸಕ್ತ ಸಾಲಿಗೆ ಯಾವುದೇ ನಿಬಂಧ ಷರತ್ತು ಹಾಕದೆ ವ್ಯವಸಾಯಕ್ಕೆ ನೀರು ಬಿಡಬೇಕು. ನಾಲೆಗಳಿಗೆ ಸುತ್ತಮುತ್ತ ಪಂಪ್ಸೆಟ್ ಕೊರೆಯಬಾರದು. ನಾಲೆಯಿಂದ ಮೋಟಾರ್‌ಗಳ ಮೂಲಕ ನೀರು ತೆಗೆದುಕೊಳ್ಳಬಾರದು ಎಂಬ ನಿಯಮ ರೈತರಿಗೆ ಮಾರಕವಾಗಿದ್ದು, ಈ ನಿಯಮವನ್ನು ಪುನರ್ ಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಭಂಗ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಮುಖ್ಯ ದ್ವಾರದಲ್ಲಿ ಎಪಿಎಂಸಿ ಮುಖಾಂತರ ತೂಕದ ಯಂತ್ರ ಅಳವಡಿಸಬೇಕು. ಮುಕ್ತ ಮಾರುಕಟ್ಟೆಯಲ್ಲಿ ಕಬ್ಬು ಮಾರಾಟಕ್ಕೆ ಅವಕಾಶ ನೀಡಬೇಕು. ಇದರಿಂದ ಕಟಾವು ವಿಳಂಬ ತಪ್ಪಿ ಪೈಪೋಟಿಯ ದರ ರೈತರಿಗೆ ಸಿಗಲಿದೆ. ರೈತರಿಗೆ ಲಾಭ, ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರವನ್ನು ಪ್ರತಿ ಟನ್‌ಗೆ ೧೦.೫ಕ್ಕೆ ಏರಿಕೆ ಮಾಡಿ ೩೪೦೦ ನಿಗದಿ ಮಾಡಿರುವುದು ರೈತರಿಗೆ ಮಾಡಿದ ದ್ರೋಹ. ತಕ್ಷಣ ಇದನ್ನು ಮರುಪರಿಶೀಲನೆ ಮಾಡಿ ೮.೫ಕ್ಕೆ ಇಳುವರಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆಯ ಲಾಭಾಂಶ ಮತ್ತು ಖರ್ಚಿನ ಬ್ಯಾಲೆನ್ಸ್ ಸೀಟನ್ನು ತನಿಖೆ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು. ಕಬ್ಬು ಕಟಾವು ಸಾಗಾಣಿಕೆ ಕೂಲಿಯನ್ನು ಮನ ಬಂದಂತೆ ನಿಗದಿ ಮಾಡಿ ರೈತರನ್ನು ಕಾರ್ಖಾನೆ ಸುಲಿಗೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಸಂಘದ ಪದಾಧಿಕಾರಿಗಳಾದ ಕೆರೆಹುಂಡಿ ರಾಜಣ್ಣ, ಅಂಕನಹಳ್ಳಿ ತಿಮ್ಮಪ್ಪ, ದೇವೇಂದ್ರ ಕುಮಾರ್, ಹಾಲಿನ ನಾಗರಾಜ್, ಹಾಡ್ಯ ರವಿ, ಶಿವರುದ್ರಪ್ಪ, ಅಂಬಳೆ ಮಹದೇವಸ್ವಾಮಿ, ಎಂ.ವಿ.ಕೃಷ್ಣಪ್ಪ ಇನ್ನಿತರರು ಸಭೆಯಲ್ಲಿ ಹಾಜರಿದ್ದರು.