ಜಿಟಿಜಿಟಿ ಮಳೆಯಲ್ಲೂ ಬೆಂಕಿ ಹೊತ್ತಿ ಉರಿದ ಕಾರು: ದಂಪತಿ ಪಾರು
ಕಲಬುರಗಿ:ಜು.25: ಜಿಟಿ ಜಿಟಿ ಮಳೆಯ ಸಂದರ್ಭದಲ್ಲಿಯೇ ಚಲಿಸುತ್ತಿದ್ದ ಸೆಂಟ್ರೋ ಕಾರೊಂದಕ್ಕೆ ಹಠಾತ್ತನೇ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ನಗರದ ರಾಜಾಪುರ ಬಡಾವಣೆಯಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೋಗುವ ಒಳ ರಸ್ತೆಯಲ್ಲಿ ಸಂಭವಿಸಿದೆ. ಕಾರಿನಲ್ಲಿದ್ದ ದಂಪತಿಯು ಸಮಯಪ್ರಜ್ಞೆ ಮೆರೆಯುವ ಮೂಲಕ ಕಾರಿನಿಂದಿಳಿದು ಅಪಾಯದಿಂದ ಪಾರಾಗಿದ್ದಾರೆ.
ಶ್ರೀನಿವಾಸ್ ಸರಡಗಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಪ್ರಸನ್ನಕುಮಾರ್ ಅವರಿಗೆ ಸೇರಿದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಸನ್ನಕುಮಾರ್ ಅವರು ತಮ್ಮ ಪತ್ನಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕರ್ತವ್ಯದ ಮೇಲೆ ಹೋಗುತ್ತಿದ್ದಾಗ ರಾಜಾಪುರ ಬಡಾವಣೆಯಲ್ಲಿನ ರಸ್ತೆಯಲ್ಲಿ ಹೋಗುತ್ತಿರುವಾಗ ಕಾರಿನ ಮುಂಭಾಗದಲ್ಲಿ ಹಠಾತ್ತನೇ ಬೆಂಕಿ ಕಾಣಿಸಿಕೊಂಡಿತು. ಹೀಗಾಗಿ ಹೊಗೆ ಎದ್ದಿದ್ದರಿಂದ ಪ್ರಸನ್ನಕುಮಾರ್ ಹಾಗೂ ಅವರ ಪತ್ನಿ ಇಬ್ಬರೂ ಕೆಳಗೆ ಇಳಿದು ನೋಡಿದಾಗ ಬೆಂಕಿ ಕ್ಷಣಾರ್ಧದಲ್ಲಿ ಆವರಿಸಿತು.
ತಕ್ಷಣವೇ ಅಗ್ನಿಶಾಮಕದಳದವರಿಗೆ ಮಾಹಿತಿ ಮುಟ್ಟಿಸಿದಾಗ ವಾಹನದೊಂದಿಗೆ ಸಿಬ್ಬಂದಿ ಧಾವಿಸಿ ಕಾರಿಗೆ ಹೊತ್ತಿದ್ದ ಬೆಂಕಿಯನ್ನು ಶಮನಗೊಳಿಸಿದರು. ಈ ಸಂದರ್ಭದಲ್ಲಿ ಉಭಯ ಮಾರ್ಗದಲ್ಲಿ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಕಂಡು ಆತಂಕಕ್ಕೆ ಒಳಗಾಗಿದ್ದರು.
ಆದಾಗ್ಯೂ, ದಂಪತಿ ಸಮಯ ಪ್ರಜ್ಞೆ ಮೆರೆದ ಪರಿಣಾಮ ಜೀವಕ್ಕೆ ಯಾವುದೇ ಅಪಾಯವಿಲ್ಲದೇ ಪಾರಾದರು. ಘಟನೆಯು ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದೆ.