ಸಂಪನ್ಮೂಲ ಬಳಕೆಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬೇಕು
ಸಂಜೆವಾಣಿ ನ್ಯೂಸ್
ಮೈಸೂರು:ಜು.೨೬:- ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಬೇಕೆಂದರೆ ಅಗತ್ಯ ವಸ್ತುಗಳು, ಸಂಪನ್ಮೂಲಗಳ ಬಳಕೆಯಲ್ಲೂ ಸುಸ್ಥಿರತೆ ಕಾಪಾಡಿಕೊಳ್ಳಬೇಕು ಎಂದು ನಾಗ್ಪುರದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ (ನೀರಿ) ಮುಖ್ಯ ವಿಜ್ಞಾನಿ ಡಾ.ಆರ್.ಜೆ.ಕೃಪಾದಂ ಪ್ರತಿಪಾದಿಸಿದರು.
ಬನ್ನಿಮಂಟಪದ ಜೆಎಸ್‌ಎಸ್ ಔಷಧ ವಿಜ್ಞಾನ ಕಾಲೇಜಿನಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹವಾಮಾನ ಬದಲಾವಣೆ ತಗ್ಗಿಸುವಿಕೆ, ಅಳವಡಿಸುವಿಕೆ ಹಾಗೂ ಸ್ಥಿತಿಸ್ಥಾಪಕತ್ವ ಕುರಿತು ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ತಾಪಮಾನ ಪ್ರಮಾಣವನ್ನು ೧.೫ ಡಿಗ್ರಿ ಸೆಲ್ಸಿಯಸ್‌ಗೇ ಸೀಮಿತಗೊಳಿಸುವುದಕ್ಕೆ ಪೂರಕವಾಗಿ ವಾತಾವರಣಕ್ಕೆ ಇಂಗಾಲದ ಹೊರಸೂಸುವಿಕೆಯ ಪ್ರಮಾಣ ಶೂನ್ಯಗೊಳಿಸಲು ಭಾರತ ಬದ್ಧತೆ ತೋರಿದೆ. ೨೦೭೦ರ ವೇಳೆಗೆ ಶೂನ್ಯ ಇಂಗಾಲದ ಆರ್ಥಿಕತೆ ಸಾಧಿಸಲು ಗುರಿ ಹಾಕಿಕೊಂಡಿದೆ ಎಂದರು.
ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು, ರಾಸಾಯನಿಕ ಕೈಗಾರಿಕೆಗಳು ಹೆಚ್ಚು ಇಂಗಾಲವನ್ನು ಹೊರಸೂಸುತ್ತವೆ. ಹಸಿರು ಇಂಧನಕ್ಕೆ ಭಾರತವು ಹೊರಳಲು ಸಿದ್ಧತೆಯನ್ನು ನಡೆಸಿದೆ. ಹೀಗಾಗಿ ನವೀಕೃತ ಇಂಧನಗಳ ಬಳಕೆಗೆ ಮುಂದಾಗಿದೆ ಎಂದು ಹೇಳಿದರು.
ಇಂಗಾಲವನ್ನು ಹೀರಿಕೊಳ್ಳುವ ಯಂತ್ರಗಳ ಅಭಿವೃದ್ಧಿ, ಖರೀದಿಯ ಜೊತೆಗೆ ಹೊರಸೂಸುವ ಘಟಕಗಳ ಸುಧಾರಣೆಗೆ ಕ್ರಮವಹಿಸುವುದು ಅಗತ್ಯವಾಗಿದೆ. ಸದ್ಯದಲ್ಲಿ ಇಂಗಾಲ ಹೀರುವಿಕೆಯ ತಂತ್ರಜ್ಞಾನ ದುಬಾರಿಯಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಗತ್ಯಗಳ ಪೂರೈಕೆಗೆ ಇಂಗಾಲ ಹೊರಸೂಸುವಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಸಿರು ಮನೆ ಅನಿಲಗಳ ಹೆಚ್ಚಳದಿಂದ ವಾತಾವರಣದ ಉಷ್ಣಾಂಶ ಹೆಚ್ಚಾಗಲಿದೆ. ಅದರಿಂದ ಕೀಟಗಳು ವ್ಯಾಪಕ ನಾಶವಾಗಲಿದೆ. ತಾಪಮಾನವು ೩ ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಜಗತ್ತಿನ ಶೇ ೬೦ರಷ್ಟು ಕೀಟಗಳು ನಿರ್ನಾಮವಾಗಲಿವೆ. ಜೀವವೈವಿಧ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯು ಮನುಷ್ಯನಿಗೆ ಸವಾಲಾಗಿದೆ. ವಾಸ್ತವವನ್ನು ಒಪ್ಪಿಕೊಂಡು ತಾಪಮಾನ ಏರಿಕೆ ತಡೆಗೆ ಮನುಷ್ಯನ ಜೀವನಶೈಲಿ ಬದಲಾಗಬೇಕಿದೆ. ಸಂಪನ್ಮೂಲಗಳ ಸುಸ್ಥಿರ ಬಳಕೆಯೇ ಮಾರ್ಗವಾಗಿದೆ ಎಂದು ಹೇಳಿದರು.
ಹವಾಮಾನ ಬದಲಾವಣೆ ತಡೆಗೆ ಕೇಂದ್ರ ಸರ್ಕಾರವು ೨೦೦೮ರಲ್ಲಿ ರಾಷ್ಟ್ರೀಯ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಅದನ್ನು ಜಾರಿಗೊಳಿಸಲು ವಾರ್ಷಿಕ ೧೧ ಲಕ್ಷ ಕೋಟಿ ಬೇಕಾಗುತ್ತದೆ. ಹೀಗಾಗಿ ಅದರ ಅನುಷ್ಠಾನ ಅಸಾಧ್ಯ. ಇಂಗಾಲವನ್ನು ಅಧಿಕ ಪ್ರಮಾಣದಲ್ಲಿ ಹೊರಸೂಸುತ್ತಿರುವ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುವುದು ಅಗತ್ಯ ಎಂದರು.
ನವೀಕೃತ ಇಂಧನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಬಳಕೆಯ ವಿದ್ಯುತ್‌ಗೆ ಸೌರಶಕ್ತಿ ಬಳಕೆ ಮಾಡಬೇಕು. ಸರ್ಕಾರದ ಯೋಜನೆಗಳ ಸೌಲಭ್ಯವನ್ನು ಜನರು ಬಳಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟ್‌ಸೂರಮಠ, ಅಕಾಡೆಮಿಯ ಪ್ರೊ.ಚಾನ್ಸಲರ್ ಡಾ.ಬಿ.ಸುರೇಶ್, ಉಪಕುಲಪತಿ ಡಾ.ಎಚ್.ಬಸವನಗೌಡಪ್ಪ, ಕುಲಸಚಿವ ಡಾ.ಬಿ.ಮಂಜುನಾಥ್, ಡೀನ್ ಡಾ.ಕೆ.ಎ.ರವೀಶ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಕಾರ್ಯಕ್ರಮ ಸಲಹೆಗಾರ್ತಿ ಡಾ.ಪ್ರೀತಿ ಸೋನಿ, ಸಂಯೋಕರಾದ ಡಾ.ಎಚ್.ಪಿ.ಶಿವರಾಜು, ಡಾ.ಎಚ್.ಚಿ.ಲಿಂಗರಾಜು ಹಾಜರಿದ್ದರು.