ಕಾಣೆಯಾದ ಮಕ್ಕಳ ಪತ್ತೆ ಕಾರ್ಯ ಚುರುಕುಗೊಳಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೨೬; ಜಿಲ್ಲಾ ವ್ಯಾಪ್ತಿಯಲ್ಲಿ ಕಾಣೆಯಾದ ಮಕ್ಕಳ ಪತ್ತೆ ಕಾರ್ಯವನ್ನು ತನಿಖಾಧಿಕಾರಿಗಳು ಚುರುಕುಗೊಳಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್ ಸೂಚನೆ ನೀಡಿದರು.ನಗರದ ಬಾಲ ಭವನ ಸಭಾಂಗಣದಲ್ಲಿ  ಕಾಣೆಯಾದ ಮಕ್ಕಳ ಪತ್ತೆ ಕುರಿತು ಪೋಷಕರು ಹಾಗೂ ತನಿಖಾ ಪೊಲೀಸ್ ಅಧಿಕಾರಿಗಳ ಸಭೆ ಜರುಗಿಸಿ ಅವರು ಮಾತನಾಡಿದರು.ಕಾಣೆಯಾದ ಮಕ್ಕಳ ಪತ್ತೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಈ ಕುರಿತು ವರದಿಯನ್ನು ಪಡೆದುಕೊಳ್ಳಲಿದೆ. ಕಾಣೆಯಾದ ಮಕ್ಕಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಪೋಷಕರ ಮಡಿಲು ಸೇರಿಸುವ ಕಾರ್ಯವಾಗಬೇಕು. ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಡೆಗಟ್ಟಲು ಕಾರ್ಯಪ್ರವೃತ್ತರಾಗಬೇಕು ಎಂದರು.೨೦೨೧ ರಿಂದ ೨೦೨೪ ವರೆಗೆ ಜಿಲ್ಲೆಯಲ್ಲಿ ೩೩೫ ಮಕ್ಕಳ ಕಾಣೆ ಪ್ರಕರಣಗಳು ಐ.ಪಿ.ಸಿ ಕಲಂ ೩೬೩ರ ಅಡಿಯಲ್ಲಿ ದಾಖಲಾಗಿವೆ. ಇವುಗಳ ಪೈಕಿ ೩೩೦ ಪಕ್ರರಣಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಇದೇ ಅವಧಿಯಲ್ಲಿ ಪೋಷಕರೊಂದಿಗೆ ಕಾಣೆಯದ ೧೨೭ ಮಕ್ಕಳ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ೧೨೩ರ ಪಕ್ರಣಗಳನ್ನು ಪತ್ತೆ ಹಚ್ಚಲಾಗಿದೆ.  ಐ.ಪಿ.ಸಿ ಕಲಂ ೩೬೩ರ ಅಡಿ ಪತ್ತೆಯಾಗದ ೦೫ ಪ್ರಕರಣಗಳ ಪೈಕಿ ೨೦೨೩ರಲ್ಲಿ ದಾಖಲಾದ ೩ ಪ್ರಕರಣಗಳನ್ನು ಜಿಲ್ಲಾ ಮಾನವ ಕಳ್ಳಸಾಗಣಿಕೆ ಘಟಕ್ಕೆ ವರ್ಗಾವಣೆ ಮಾಡಲಾಗಿದೆ. ೨೦೨೪ರಲ್ಲಿ ದಾಖಲಾದ ೦೨ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಕಾಣೆಯಾದ ಮಗು ಪತ್ತೆಯಾಗಿದೆ. ಪೋಷಕರೊಂದಿಗೆ ಕಾಣೆಯಾದ ಪ್ರಕರಣಗಳಲ್ಲಿ ಪತ್ತೆಯಾಗದ ೦೪ ಪ್ರಕರಣಗಳ ಪೈಕಿ ೦೧ ಪ್ರಕರಣದಲ್ಲಿ ಮಗುವನ್ನು ಪತ್ತೆ ಹಚ್ಚಲಾಗಿದೆ ಎಂದು ಸಂಬಂಧ ಪಟ್ಟ ತನಿಖಾ ಪೊಲೀಸರು ನ್ಯಾಯಾಧೀಶರಿಗೆ ವರದಿ ನೀಡಿದರು.ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಸವಿತಾ, ಡಿವೈಎಸ್‌ಪಿ ದಿನಕರ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಸವರಾಜ್, ಗುರುಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.