8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ಅಧ್ಯಕ್ಷರಾಗಿ ವಿನೋದ್ ಪಾಟೀಲ್
ಕಲಬುರಗಿ:ಜು.25: ಬರುವ ಅಗಸ್ಟ್ ಕೊನೆಯ ವಾರದಲ್ಲಿ ಜರುಗಲಿರುವ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ವಿನೋದ್ ಪಾಟೀಲ್ ಸರಡಗಿ ಹಾಗೂ ಕಾರ್ಯಾಧ್ಯಕ್ಷರಾಗಿ ರಾಘವೇಂದ್ರ ಕಲ್ಯಾಣಕರ್ ಅವರಿಗೆ ಆಯ್ಕೆ ಮಾಡಲಾಗಿದೆ.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ನಂತರ ಸಜ್ಜನಶೆಟ್ಟಿ ಅವರು ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ. ಜಲ್ವಂತ ಸಮಸ್ಯೆ ಹಾಗೂ ಸಾಮಾಜಿಕ ತಲ್ಲಣಗಳ ಬಗ್ಗೆ ಚರ್ಚೆ, ಸಂವಾದ, ಗೋಷ್ಠಿಗಳು ಆಯೋಜಿಸಲಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ವಿನೋದ್ ಪಾಟೀಲ್ ಹಾಗೂ ರಾಘವೇಂದ್ರ ಕಲ್ಯಾಣಕರ್ ಅವರು ಮಾತನಾಡಿ, ಇಂತಹ ಸಾಹಿತ್ಯ ಸೇವೆಯ ಬಹು ದೊಡ್ಡ ಜವಾಬ್ದಾರಿ ವಹಿಸಿದ್ದು ತುಂಬಾ ಖುಷಿ ತಂದಿದೆ. ಎಲ್ಲರ ಜೊತೆಗೂಡಿ ಸಮ್ಮೇಳನದ ಯಶಸ್ವಿಗೆ ಶ್ರಮಿಸೋಣ. ಜಿಲ್ಲೆಯಲ್ಲಿ ಇದೊಂದು ಅಪರೂಪದ ಸಮ್ಮೇಳನ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಗೌರವ ಕಾರ್ಯದರ್ಶಿಗಳಾದ ಧರ್ಮಣ್ಣ ಧನ್ನಿ, ಶಿವರಾಜ್ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂಧಿ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವಿಶಾಲಕ್ಷಿ ಮಾಯಣ್ಣವರ್, ವಿಶ್ವನಾಥ್ ಸಿ. ಯನಗುಂಟಿ. ಸಹ ಕಾರ್ಯದರ್ಶಿ ಪ್ರಭವ್ ಪಟ್ಟಣಕರ್, ಮಹಿಳಾ ಪ್ರತಿನಿಧಿ ಭಾಗ್ಯಶ್ರೀ ಮರಗೋಳ್, ಸುನಿತಾ ಮಾಳಗಿ. ಪದಾಧಿಕಾರಿಗಳಾದ ಮಂಜುನಾಥ್ ಕಂತೆಗೋಳ್, ಮಲ್ಲಿಕಾರ್ಜುನ್ ಇಬ್ರಾಹಿಂಪುರ ವಿಜಯಕುಮಾರ್ ಹಾಬನೂರ್, ರೇವಯ್ಯ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.