ಪಿಂಜಾರ್ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಮನವಿ
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಜು,25-  ರಾಜ್ಯಾದ್ಯಂತ ಸುಮಾರು 22 ರಿಂದ25 ಲಕ್ಷ ಜನಸಂಖ್ಯೆ ಹೊಂದಿರುವ ನದಾಫ್/ಪಿಂಜಾರ್ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಒತ್ತಾಯಿಸಿ ಉಪ ತಾಹಶೀಲ್ದಾರ್ ರಾಘವೇಂದ್ರ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಸೇರಿದಂತೆ ಹಲವಾರು ರಂಗಗಳಲ್ಲಿ ಹಿಂದುಳಿದ ಸಮುದಾಯವಾಗಿದೆ.
ಈ ಜನಾಂಗವು ಇಸ್ಲಾಂ ಧರ್ಮದ ಮುಸ್ಲಿಂ (ಅಲ್ಪಸಂಖ್ಯಾತ) ಪಂಗಡದಲ್ಲಿದ್ದು, ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ನದಾಫ್ / ಪಿಂಜಾರ ಉಪಜಾತಿಯ ಪ್ರವರ್ಗ-1ರಲ್ಲಿ ಮೀಸಲಾತಿಯನ್ನು ಹೊಂದಿದೆ. ಇಲ್ಲಿಯವರೆಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಹಾಗೂ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರ್ಕಾರದ ನಿರ್ದೇಶನವಿದ್ದರೂ, ಸತತವಾಗಿ ತಾಂತ್ರಿಕ ದೋಷಗಳಿಂದ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯಾವುದೇ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗಿದ್ದಾರೆ. ಇದರ ನಿವಾರಣೆಗೆ ಹಲವಾರು ವರ್ಷಗಳಿಂದ ಹೋರಾಟ ಮಾಡಿದ ಫಲವಾಗಿ ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಮಾರ್ಚ್-2023ರಲ್ಲಿ ಪ್ರತ್ಯೇಕವಾಗಿ ನದಾಫ್/ಪಿಂಜಾರ ಅಭಿವೃದ್ಧಿ ನಿಗಮದ ಆದೇಶ ಮಾಡಿದ್ದು.
ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಬಂದ ನಂತರ ಸಮುದಾಯದ ಹಿತದೃಷ್ಟಿಯಿಂದ ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಹಲವಾರು ಬಾರಿ ಮನವಿ ನೀಡಿದ್ದರೂ ಸ್ಪಂದಿಸಿಲ್ಲ. ಸರ್ಕಾರವು ಇನ್ನು ಮುಂದೆ ಆದರು ಎಚ್ಚೆತ್ತುಕೊಂಡು ಪಿಂಜಾರ್ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಬೇಕೆಂದು ಪಿಂಜಾರ್ ತಾಲ್ಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಸುಳುವಾಯಿ ನಭೀಸಾಬ್, ರಾಜ್ಯ ಕಾರ್ಯಕಾರ್ಯಿ ಸದಸ್ಯ ಎಂ.ದಾದಾ ಕಲಂದರ್, ಜಿಲ್ಲಾ ಸದಸ್ಯ ಜೆ.ರಾಜಸಾಬ್, ತಾಲೂಕು ಉಪಾಧ್ಯಕ್ಷ ಎಸ್. ಬಂದೇ ನವಾಜ್, ತಾಲ್ಲೂಕು ಕಾರ್ಯದರ್ಶಿ ಎಂ.ಖಾದರ್ ಭಾಷಾ, ಮಾಜಿ ಜಿಲ್ಲಾಧ್ಯಕ್ಷ ವೈ ಭಾಷಾಸಾಬ್ ಇದ್ದರು.