ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಾರಂಭ.
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ):ಜು,25- ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ತಾಲ್ಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಪಾಪಿನಾಯಕನಹಳ್ಳಿ ಏತ ನೀರಾವರಿ ಯೋಜನೆಯಡಿಯಲ್ಲಿ ಇದೇ ಮೊದಲ ಬಾರಿಗೆ ತಳವಾರಘಟ್ಟ ಜಾಕ್ವೆಲ್‌ನಿಂದ ನೀರನ್ನು ಪಂಪ್‌ ಮಾಡಲಾಗಿದೆ.
ಬುಧವಾರ ಬೆಳಿಗ್ಗೆ ಶಾಸಕ ಎಚ್‌.ಆರ್.ಗವಿಯಪ್ಪ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ವಿರೂಪಾಕ್ಷ, ರೈತ ಸಂಘದ ನಾಯಕರು ಪಂಪ್‌ಹೌಸ್‌ನಲ್ಲಿ  ಪೂಜೆ ಸಲ್ಲಿಸಿ, ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಒಂದು ಪಂಪ್‌ ಅನ್ನು  ಚಾಲೂ ಮಾಡಲಾಯಿತು.
‘ಕಳೆದ ವರ್ಷ ಬರಗಾಲ ಕಾರಣ ನೀರು ಎತ್ತುವುದು ಸಾಧ್ಯವಾಗಲಿಲ್ಲ, ಈ ಬಾರಿ ವರುಣ ದೇವನ ಕೃಪೆಯಿಂದ ತುಂಗಭದ್ರಾ ಅಣೆಕಟ್ಟೆಯಿಂದ ನೀರು ನದಿಗೆ ಹರಿದು ಬಂದಿದೆ. ಹೀಗಾಗಿ 90 ದಿನಗಳಲ್ಲಿ ತಾಲ್ಲೂಕಿನ 22 ಕೆರೆಗಳ ಪೈಕಿ 20 ಕೆರೆಗಳನ್ನು ತುಂಬಿಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ವಿರೂಪಾಕ್ಷ ತಿಳಿಸಿದರು.
0.30 ಟಿಎಂಸಿ ಅಡಿ ನೀರು ಬಳಕೆ: ‘ಈ ಯೋಜನೆಯಡಿಯಲ್ಲಿ 0.30 ಟಿಎಂಸಿ ಅಡಿಯಷ್ಟು ನೀರನ್ನು ಕೆರೆಗಳಿಗೆ ಪಂಪ್‌ ಮಾಡಲಾಗುತ್ತದೆ. 20 ಕೆರೆಗಳ ಪೈಕಿ 17 ಕೆರೆಗಳು ಹಳೆಯ ಕೆರೆಗಳಾಗಿವೆ. ಎರಡು ಕೆರೆಗಳಷ್ಟೇ ದುರಸ್ತಿಗೆ ಬಾಕಿ ಉಳಿದಿವೆ. ಭೂಸ್ವಾಧೀನ, ಅಧಿಕ ಪರಿಹಾರ ನೀಡಿಕೆ ವಿವಾದ ಇರುವ ಕಾರಣ ಎರಡು ಕೆರೆಗಳನ್ನು ಸಜ್ಜುಗೊಳಿಸುವ ಕಾರ್ಯ ಪೂರ್ಣಗೊಂಡಿಲ್ಲ. 13 ಹಳ್ಳಿಗಳ ಕೃಷಿ ಕಾರ್ಯಗಳಿಗೆ ಹಾಗೂ ಅಂತರ್ಜಲ ವೃದ್ಧಿಗೆ ಈ ಕೆರೆ ತುಂಬಿಸುವಿಕೆಯಿಂದ ಪ್ರಯೋಜನವಾಗಲಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.
‘ತಲಾ 1,140 ಅಶ್ವಶಕ್ತಿಯ 5 ಪಂಪ್‌ಗಳು ಇದ್ದು, ನಾಲ್ಕು ಪಂಪ್‌ಗಳನ್ನು ಚಾಲೂಗೊಳಿಸಿ ನೀರನ್ನು ಎತ್ತಲಾಗುವುದು. ಒಂದು ಪಂಪ್‌ ಅನ್ನು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗುತ್ತಿದೆ’ ಎಂದರು.
ಮುಖಂಡರಾದ ಶ್ರೀರಾಮಚಂದ್ರಗೌಡ ಶ್ರೀ ಗಿಂಜಿ ಮಂಜುನಾಥ ಮುತ್ತು ರೈತ ಸಂಘದ ಹಸಿರು ಸೇನೆ ತಾಲೂಕು ಅಧ್ಯಕ್ಷರಾದ  ಟಿ ನಾಗರಾಜ್  ಮುತ್ತು ರುದ್ರಪ್ಪ  ಕಮಲಾಪುರ ಮುಖಂಡರಾದ ಶ್ರೀ ಕಾಳಪ್ಪ ಕೆಡಿಪಿ ಸದಸ್ಯರು  ಮತ್ತು ಖಾದ್ರಿ ಸಾಹೇಬರು  ಹಾಗೂ ವೆಂಕಟಾಪುರ ಮುಖಂಡರಾದ ವೀರಣ್ಣನವರು ಈ ಅಶೋಕ್ ಅವರು  ಬುಕ್ಕಸಾಗರದ ಈ ಕೃಷ್ಣಪ್ಪ  ಲಿಂಗರಾಜ ಕೃಷ್ಣ  ಕಡ್ಡಿ ರಾಂಪುರ ಗ್ರಾಮದ ಬಿ ಗೋಪಾಲ  ಹೊಸಪೇಟೆ ಮಾಜಿ ನಗರಸಭೆ ಸದಸ್ಯರಾದ ಕೆ ಬಡಾವಲಿ ಪಾಪಿನಾಯಕನಹಳ್ಳಿ ಮುಖಂಡರಾದ  ಉದ್ದವಾಳ ಪಂಪಾಪತಿ ಅಂಕಲೇಶ್ ಮಾಜಿ ಅಧ್ಯಕ್ಷರಾದ ಮುರಳಿದರ ಮತ್ತು ಹನುಮಂತ್ರಾಯ
 ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೌಡಕಿ ಚಂದ್ರಪ್ಪ ವಡ್ಡರಹಳ್ಳಿ ಹೊನ್ನೂರಪ್ಪ  ಮತ್ತು ಶಾಸಕರ ಅಪ್ಪ ಸಹಾಯಕರಾದ ಯೋಗೇಶ್ ಹಾಗೂ  ಅನೇಕ ಜನ ಮುಖಂಡರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.