ಜನಮನ ರಂಜಿಸಿದ ‘ಕವಿರತ್ನ ಕಾಳಿದಾಸ’ ಯಕ್ಷಗಾನ.
ಸಂಜೆವಾಣಿ ವಾರ್ತೆ
ಹೊಸಪೇಟೆ: ಜು,25-ನಗರದ ಮೀರಾಲಂ ಟಾಕೀಸ್ ಹಿಂಭಾಗದ ವಿ.ಎನ್‌.ರಾಯಲ್‌ ಗಾರ್ಡನ್‌ ಫಂಕ್ಷನ್‌ ಹಾಲ್‌ನ ಮುಂಭಾಗ ಬುಧವಾರ ರಾತ್ರಿ ಪ್ರದರ್ಶನಗೊಂಡ ‘ಕವಿರತ್ನ ಕಾಳಿದಾಸ‘ ಯಕ್ಷಗಾನ ಕಲಾರಸಿಕರನ್ನು ಬಹುವಾಗಿ ರಂಜಿಸಿತು.
ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ಮೆಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಆಯ್ದ ಕಲಾವಿದರಿಂದ ನಡೆದ ಈ ಯಕ್ಷಗಾನ ಸುಮಾರು ಮೂರು ಗಂಟೆ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಮಳೆ ಬಿಡುವು ನೀಡಿದ್ದರಿಂದ ಫಂಕ್ಷನ್‌ ಹಾಲ್‌ನ ಹೊರಭಾಗದ ಆಹ್ಲಾದಕರ ವಾತಾವರಣದಲ್ಲಿ ನೂರಾರು ಜನರು ಕರಾವಳಿ ಕರ್ನಾಟಕದ ಗಂಡುಕಲೆಯನ್ನು ಕಂಡು ತಲೆದೂಗಿದರು.
ಅರ್ಡಿ ಸಂತೋಷ್‌ ಅವರ ಭಾಗವತಿಕೆ ಗಾನಸುಧೆಯನ್ನೇ ಹರಿಸಿದರೆ, ಸುಬ್ರಹ್ಮಣ್ಯ ಹೆಗಡೆ ಮೂರೂರು ಮತ್ತು  ಪ್ರಶಾಂತ್ ಭಂಡಾರಿ ಚೆಂಡೆ, ಮದ್ದಳೆಯಲ್ಲಿ ಸಹಕರಿಸಿದರು.
ಮುಮ್ಮೇಳದಲ್ಲಿ ಜಲವಳ್ಳಿ ವಿದ್ಯಾಧರ, ರಮೇಶ್ ಭಂಡಾರಿ, ರಾಜೇಶ್ ಭಂಡಾರಿ, ನೀಲ್ಕೋಡ್ ಶಂಕರ್ ಹೆಗಡೆ, ನರಸಿಂಹ ಗಾಂವ್ಕರ್, ಜಯರಾಮ ಕೊಠಾರಿ, ರಟ್ಟಾಡಿ ಶ್ರೀಕಾಂತ್, ಅಜಿತ್ ಶೆಟ್ಟಿ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದರು. ಈ ಪೈಕಿ ಕಾಳನಾಗಿ ಅಭಿನಯಿಸಿದ ರಮೇಶ್ ಭಂಡಾರಿ, ಮಂತ್ರಿಯಾಗಿ ಅಭಿನಯಿಸಿದ ಜಲವಳ್ಳಿ ವಿದ್ಯಾಧರ, ರಾಜಕುಮಾರಿ ವಿದ್ಯಾಧರೆಯಾಗಿ ಅಭಿನಯಿಸಿದ ನೀಲ್ಕೋಡ್ ಶಂಕರ್ ಹೆಗಡೆ ಅವರು ತಮ್ಮ ಅಭಿನಯ, ಮಾತುಗಾರಿಕೆಗಳಿಂದ ಪ್ರೇಕ್ಷಕರನ್ನು ರಂಜಿಸಿದರು.
ಕಥಾ ಸಾರಾಂಶ: ರಾಜಕುಮಾರಿ ವಿದ್ಯಾಧರೆ ತನ್ನ ವಿದ್ಯೆಗೆ ಸರಿಸಮನಾದ ವರನನ್ನು ಹುಡುಕುವಂತೆ ಅಪ್ಪನಿಗೆ ಹೇಳುತ್ತಾಳೆ, ಆದರೆ ಮಂತ್ರಿಯು ತನ್ನ ಮಗನಿಗೇ ವಿದ್ಯಾಧರೆಯೊಂದಿಗೆ ಮದುವೆ ಮಾಡಿಸಲು ಸಂಚು ರೂಪಿಸುತ್ತಾನೆ.  ಮಂತ್ರಿಯ ಹೆಡ್ಡ ಮಗನಿಗೆ ರಾಜಕುಮಾರಿ ತಕ್ಕ ಶಾಸ್ತಿ ಮಾಡಿದಾಗ ಮಂತ್ರಿ ಜಿದ್ದಿಗೆ ಬಿದ್ದು, ಒಬ್ಬ ಅನಕ್ಷರ ಕುಕ್ಷಿಯನ್ನು ಹುಡುಕಿ, ಮೋಸದಿಂದ ರಾಜಕುಮಾರಿಗೆ ಮದುವೆ ಮಾಡಿಸಿಬಿಡುತ್ತಾನೆ. ಮೋಸದ ಅರಿವಾಗಿ ವಿದ್ಯಾಧರೆ ಕಾಳಿಯ ಮೊರೆ ಹೋದಾಗ ಕಾಳಿಯು ಕಾಳ್ಯಾನಿಗೆ ಬೀಜಾಕ್ಷರ ಬೋಧಿಸಿ ಆತ ಪ್ರಕಾಂಡ ಪಂಡಿತನಾಗಿ ಬದಲಾಗುವಂತೆ ಮಾಡುತ್ತಾಳೆ. ಮುಂದೆ ಭೋಜರಾಜನ ಆಸ್ಥಾನದಲ್ಲಿ ವಾದ ಮಂಡಿಸಿ ಕಾಳಿದಾಸ ಗೆಲ್ಲುತ್ತಾನೆ. ಅವರ ದಾಂಪತ್ಯ ಸುಖಮಯವಾಗುತ್ತದೆ. ಈ ಕತೆಯನ್ನು ಯಕ್ಷಗಾನದಲ್ಲಿ ಅಳವಡಿಸಿ ಆಡಿ ತೋರಿಸಿದ ಯಕ್ಷಗಾನ ತಂಡ ಹೊಸಪೇಟೆಯ ಜನಮೆಚ್ಚುಗೆ ಪಡೆಯಿತು.