ಬಾಲ್ಯ ವಿವಾಹ ತಡೆಗಟ್ಟಿ
ಗದಗ,ಜು.೨೫: ಪಾಲಕ ಹೊಂದಿದ ಮತ್ತು ಅನಾಥ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಸೌಲಭ್ಯಗಳು ಸರಿಯಾಗಿ ತಲುಪಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕ ಮಟ್ಟದ ವಿವಿಧ ಸಮಿತಿಯ ಸಭೆಗಳು ಕಡ್ಡಾಯವಾಗಿ ಜರಗಬೇಕು ಮತ್ತು ಬಾಲ ಮಂದಿರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬಾಲ್ಯವಿವಾಹಗಳನ್ನು ತಡೆಗಟ್ಟಲು ಪ್ರೌಢ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹದ ದುಷ್ಟರಿಣಾಮದ ಅರಿವನ್ನು ವ್ಯಾಪಕವಾಗಿ ಪ್ರಚಾರಮಾಡಬೇಕು, ಸಾಮೂಹಿಕ ಮದುವೆ ಜೊತೆಗೆ ವಯಕ್ತಿಕವಾಗಿ ನಡೆಯುವ ಮದುವೆಗಳಲ್ಲಿಯೂ ಗಮನಹರಿಸಬೇಕು. ಸಂಶಯ ಬಂದಲ್ಲಿ ಆಧಾರ ಕಾರ್ಡ್, ಶಾಲಾ ದಾಖಲಾತಿ, ವೈದ್ಯಕೀಯ ಪರೀಕ್ಷೆ ನಡೆಸಿ ಪರಿಶೀಲಿಸಬೇಕು ಎಂದರು.
ಪೊಕ್ಸೊ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಉದ್ಯಾನವನದಲ್ಲಿ, ಆಟೋ ಚಾಲಕ, ಕಾರ್ಮಿಕರಲ್ಲಿ ಕಾಯ್ದೆಯನ್ನು ತಿಳಿಸಿ ಅರಿವು ಮೂಡಿಸಬೇಕು ನಿರ್ದೇಶಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗ ಶಿವನಗೌಡ್ರ ಮಾತನಾಡಿ ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆಯ ಮೂಲಕ ಎಲ್ಲಾ ಠಾಣೆ ಮತ್ತು ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹವಾಗದಂತೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ರಫೀಕಾ ಸಭೆಗೆ ೨೦೨೩-೨೪ ನೇ ೪ ನೇ ತ್ರೆöÊಮಾಸಿಕ ಮತ್ತು ೨೦೨೪-೨೫ ನೇ ಸಾಲಿನ ನಡಾವಳಿಗಳನ್ನು ತಿಳಿಸಿದರು.
ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಭರತ್ ಎಸ್ ಮಾತನಾಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವ ಪ್ರಯತ್ನ ವಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ.ಬೈಲೂರು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ ರೆಡ್ಡೆರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.