ಬರಲಿಲ್ಲಾ…ಬರಲಿಲ್ಲಾ…ಗೃಹಲಕ್ಷ್ಮಿಕಂತು ಕಟ್ಟಲು ಮಹಿಳೆಯರ ಪರದಾಟ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,25- ಸಿದ್ದರಾಮಯ್ಯನವರ ಗ್ಯಾರಂಟಿ ಸ್ಕೀಂನ  ಗೃಹಲಕ್ಷ್ಮೀ ಹಣ ಬರುತ್ತೆ ಎಂದು ಕಂತಿನ‌ ಮೇಲೆ ಚಿನ್ನ ತಂದ್ವಿ, ಟಿವಿ ತಂದ್ವಿ, ಪ್ರಿಡ್ಜ್ ತಂದ್ವಿ ಎನ್ನುತ್ತಿದ್ದ ಮಹಿಳೆಯರು ಈಗ ಬಾರದ ಗೃಹಲಕ್ಷ್ಮಿಯಿಂದ ಕಂತು ಕಟ್ಟಲು ಪರಾದಾಡುವ ಪರಿಸರ ಸ್ಥಿತಿ ಬಂದಿದೆ.
ಪಂಚ ಗ್ಯಾರೆಂಟಿಗಳಲ್ಲಿ ಒಂದಾದ ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸರ್ಕಾರ ಗೃಹಲಕ್ಷ್ಮೀ  ಯೋಜನೆಯಡಿ ಕುಟುಂಬದ ಓರ್ವ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುತ್ತಾ ಬಂದಿತ್ತು.
ಕಳೆದ ಅಗಷ್ಟ ತಿಂಗಳಿಂದ ಮೇ ವರೆಗೆ ಹಣ ತಪ್ಪದೆ ಬಂದಿತ್ತು. 9 ತಿಂಗಳ 18 ಸಾವಿರ ರೂ ಹಣದಿಂದ ಹಿಗ್ಗಿದ್ದ ಮಹಿಳೆಯರು ಖರ್ಚು ಮಾಡಿ ಉಳಿಸಿಕೊಂಡಿದ್ದ ಒಂದಿಷ್ಟು ಹಣದಿಂದ ಪ್ರತಿ ತಿಂಗಳು ಕಂತು ಕಟ್ಟುತ್ತೇವೆ ಎಂದು ಚಿನಗನ ತೆಗೆದುಕೊಂಡಿದ್ದಾರೆ. ಹಳೆ ಡೂಮ್ ಟಿವಿ ಬದಲು ಸ್ಮಾರ್ಟ್ ಎಲ್.ಇ.ಡಿ ಟಿವಿ, ಕೆಲವರು ಪ್ರಿಡ್ಜ್ ಖರೀದಿಸಿದ್ದರೆ. ಇನ್ನು ಕೆಲವರು ಖಾಸಗಿ ಪೈನಾನ್ಸ್ ಗಳಲ್ಲಿ ಸಾಲ ಮಾಡಿದ್ದಾರೆ.
ಕಳೆದ ಎರೆಡು ತಿಂಗಳಿಂದ ಗೃಹಲಕ್ಷ್ಮಿ ಹಣ ಬಾರದೆ, ಕಾದು ಕಾದು ಕಂತು‌ ಕಟ್ಟಲಾಗದೆ ಮಹಿಳೆಯರು ಈಗ ಪರಿಸುವಂತಾಗಿದೆ.
ಕಂತು‌ ಕಟ್ಟಲು ತುಟ್ಟಿ ಬಡ್ಡಿ ತೆಗೆದುಕೊಳ್ಳುತ್ತಿದ್ದಾರಂತೆ.  ಗೃಹಲಕ್ಷ್ಮಿ ಹಣ ಬಂತಾ ಎಂದು ಕೆಲವರು ಬ್ಯಾಂಕ್, ಅಂಚೆ ಕಚೇರಿಯತ್ತ ತಿರುಗಾಡುತ್ತಿದ್ದಾರೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಕಳೆದ ತಿಂಗಳ ಕೊನೆಯಿಂದಲೂ ಹಣ ಬಿಡುಗಡೆಯಾಗಿದೆ, ಡಿಬಿಡಿಯಿಂದ “ಪುಶ್” ಆಗಿದೆ ಎಂದು ಹೇಳುತ್ತಲೇ ಇದ್ದಾರೆ. ಆದ್ರೆ ಗೃಹಲಕ್ಷ್ಮಿ ಮಾತ್ರ ಅಕೌಂಟ್ ಗೆ ಬರುತ್ತಿಲ್ಲ. ಹೆಬ್ಬಾಳ್ಕರ್ ಹೇಳುವ ರೀತಿ ಅದು ವಾಲ್ಮೀಕಿ ನಿಗಮದ ಹಣದಂತೆ ಬೇರೆ ಕಡೆಗೆ ಪುಶ್ ಆಗಿದಿಯಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಟ್ಟಿನಲ್ಲಿ ಗ್ಯಾರೆಂಟಿ ರೊಕ್ಕ ನಂಬಿದ ಮಹಿಳೆಯರು ಕಂತಿನ ಸಾಲ ಮಾಡಿಕೊಂಡಿದ್ದು ತಪ್ಪಾಯ್ತು ಎನ್ನುವಂತಾಗಿದೆ.
ಆದ್ರೆ 5 ಕಿಲೋ ಪಡಿತರ ಅಕ್ಕಿಯ ರೊಕ್ಕ ಮಾತ್ರ ಅಕೌಂಟಿಗೆ ಬಂದಿದೆಯಂತೆ ಇದು ಒಂದಿಷ್ಟು ನೆಮ್ಮದಿ ನೀಡಿದೆ ಎನ್ನಲಾಗಿದೆ.