ಸಿಯುಕೆಯಲ್ಲಿ ಅತ್ಯಾಧುನಿಕ ಸಲಕರಣೆಗಳುಳ್ಳ ಜಿಮ್ ಕೇಂದ್ರ ಉದ್ಘಾಟನೆ
ಕಲಬುರಗಿ:ಜು.25:“ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ನಿಯಮಿತ ವ್ಯಾಯಾಮ ಅತ್ಯಗತ್ಯ” ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು. ನಿನ್ನೆ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕ ಸಲಕರಣೆಗಳುಳ್ಳ ವಿಶ್ವವಿದ್ಯಾಲಯ ಜಿಮ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ದೈಹಿಕವಾಗಿ ಬಲಶಾಲಿ ಯಾದರೆ ಮಾನಸಿಕವಾಗಿ ಬಲಶಾಲಿಯಾಗಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಮನಸ್ಸು ಮತ್ತು ದೇಹದಿಂದ ಆರೋಗ್ಯವಾಗಿರಬೇಕು. ನಾವು ಉತ್ತಮ ತರಬೇತಿ ಪಡೆದ ಬೋಧಕರನ್ನು ನೇಮಿಸಿದ್ದೇವೆ ಮತ್ತು ಮೂಲಭೂತ ಸೌಲಭ್ಯಗಳು ಒದಗಿಸಲಾಗಿದೆ. ಇವುಗಳನ್ನು ತಾವು ಸೂಕ್ತವಾಗಿ ಬಳಸಿಕೊಂಡು ನಿಯಮಿತವಾಗಿ ವ್ಯಾಯಾಮ ಮಾಡಬೇಕು” ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಅವರು ಮಾತನಾಡಿ, “ನಿಯಮಿತ ವ್ಯಾಯಾಮ ಮತ್ತು ಜಿಮ್‌ನ ಬಳಕೆಯಿಂದ ಅನೇಕ ಪ್ರಯೋಜನಗಳಿವೆ, ಇದು ಶಕ್ತಿಯುತವಾಗಿರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ, ಉಸಿರಾಟವನ್ನು ಸುಧಾರಿಸುತ್ತದೆ ಮತ್ತು ಬಿಪಿ ಹಾಗು ಅಸ್ತಮಾದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಇಪ್ಪತ್ತು ನಿಮಿಷಗಳ ವ್ಯಾಯಾಮವು ಶೇ. 10 ರಷ್ಟು ನೆನಪಿನ ಶಕ್ತಿಯನ್ನು ಹಾಗು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಹೃದಯರಕ್ತನಾಳದ ದಾಳಿಯ ಅಪಾಯವನ್ನು ಕಡಿಮೆ ಮಾಡುತ್ತದೆ” ಎಂದು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ, ಪ್ರೊ. ಎಂ ಎಸ್ ಪಾಸೋಡಿ ಅವರು ಈ ಸಂದರ್ಭದಲ್ಲಿ ಮಾತನಾಡಿ ಎಲ್ಲಾ ಉಪಕರಣಗಳು ಮತ್ತು ಅವುಗಳ ಉಪಯುಕ್ತತೆಯ ಬಗ್ಗೆ ವಿವರಿಸಿದರು. ದೈಹಿಕ ಶಿಕ್ಷಣ ಸಂಯೋಜಕ ಡಾ.ಸಾಯಿ ಅಭಿನವ, ಡೀನ್ ವಿದ್ಯಾರ್ಥಿಗಳ ಕಲ್ಯಾಣ ಡಾ.ಬಸವರಾಜ ಕುಬಕಡ್ಡಿ, ಕ್ಯಾಂಪಸ್ ಅಭಿವೃದ್ಧಿ ಡೀನ್ ಪ್ರೊ.ಚನ್ನವೀರ ಆರ್.ಎಂ., ಪ್ರೊ.ಬಸವರಾಜ ಡೋಣೂರ, ಪ್ರೊ.ಜಿ.ಆರ್.ಅಂಗಡಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.